ರಿಯಾದ್ ನಲ್ಲಿ ಎಚ್ಚರಿಕೆ ಸಂದೇಶ; ವಿಚಲಿತರಾಗದೆ ಭಾಷಣ ಮುಂದುವರಿಸಿದ ಸೌದಿ ಸಚಿವ; ವೀಡಿಯೊ ವೈರಲ್
‘ನಾವು ದೇವರ ರಕ್ಷಣೆಯಲ್ಲಿದ್ದೇವೆ’ ಎಂದ ಅಲ್–ರಾಝ್ಹಿ
Photo Credit : gulfnews.com
ದುಬೈ: ರಿಯಾದ್ ಆರ್ಥಿಕ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ತುರ್ತು ಎಚ್ಚರಿಕೆ ಸಂದೇಶ ಮೊಳಗಿದರೂ ವಿಚಲಿತರಾಗದೆ, ಸಭಿಕರಿಗೆ ಧೈರ್ಯ ತುಂಬಿದ ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಬಿನ್ ಸುಲೈಮಾನ್ ಅಲ್–ರಾಝ್ಹಿ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್–ರಾಝ್ಹಿ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಸಭಾಂಗಣದಲ್ಲಿ ಎಚ್ಚರಿಕೆ ಸಂದೇಶ ಮೊಳಗಿತು. ಅಲ್ಲಿದ್ದವರ ಮೊಬೈಲ್ ಫೋನ್‌ಗಳಲ್ಲೂ ಎಚ್ಚರಿಕೆಯ ಸೂಚನೆಗಳು ಕೇಳಿಬಂದವು. ಈ ವೇಳೆ ವೇದಿಕೆಯಿಂದ ನಿರ್ಗಮಿಸುವ ಬದಲು ಅಲ್ಲಿಯೇ ಉಳಿದ ಸಚಿವರು, ಸಭಿಕರಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದರು.
‘ದೇವರ ಇಚ್ಛೆಯಂತೆ, ದೇವರು ಅವರ ಸಂಚುಗಳನ್ನು ಅವರ ವಿರುದ್ಧವೇ ತಿರುಗಿಸಲಿ. ನಾವು ಜಗತ್ತಿನ ಒಡೆಯನ ರಕ್ಷಣೆಯಲ್ಲಿದ್ದೇವೆ’ ಎಂದು ಹೇಳಿದರು. ಸಚಿವರ ಮಾತುಗಳಿಗೆ ಸಭಿಕರು ಚಪ್ಪಾಳೆ ತಟ್ಟಿದರು. ಬಳಿಕ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.
ಸೌದಿ ಅರೇಬಿಯಾದ ಮೇಲೆ ನಡೆದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಭದ್ರತಾ ಆತಂಕ ಹೆಚ್ಚಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಗಳೂ ಈ ಆತಂಕಕ್ಕೆ ಕಾರಣವಾಗಿವೆ.
ರಿಯಾದ್ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ಅಕ್ಟೋಬರ್ 12ರಿಂದ 14ರವರೆಗೆ ನಡೆದ ಮೂರು ದಿನಗಳ 12ನೇ ರಿಯಾದ್ ಇಕನಾಮಿಕ್ ಫೋರಂ ನಲ್ಲಿ ಈ ಘಟನೆ ನಡೆದಿದೆ.
ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರ ಆಶ್ರಯದಲ್ಲಿ ರಿಯಾದ್ ಚೇಂಬರ್ ಆಯೋಜಿಸಿರುವ ಈ ಫೋರಂ ಸೌದಿ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳನ್ನು ಪರಿಶೀಲಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ಶಿಫಾರಸುಗಳನ್ನು ರೂಪಿಸುವ ಉದ್ದೇಶ ಹೊಂದಿದೆ. ಸರ್ಕಾರಿ ಅಧಿಕಾರಿಗಳು, ಉದ್ಯಮದ ನಾಯಕರು, ಶಿಕ್ಷಣ ತಜ್ಞರು ಮತ್ತು ಆರ್ಥಿಕ ತಜ್ಞರು ಇದರಲ್ಲಿ ಭಾಗವಹಿಸುತ್ತಾರೆ.
2003ರಲ್ಲಿ ಸ್ಥಾಪನೆಯಾದ ಈ ಫೋರಂ ಆರ್ಥಿಕ ಅಭಿವೃದ್ಧಿ, ಹೂಡಿಕೆ ಮತ್ತು ನೀತಿ ಶಿಫಾರಸುಗಳ ಮೇಲೆ ಗಮನಹರಿಸುತ್ತದೆ. ಈ ವರ್ಷದ ಚರ್ಚೆಗಳಲ್ಲಿ ಕೃತಕ ಬುದ್ಧಿಮತ್ತೆ (AI), ಆಹಾರ ಮತ್ತು ನೀರಿನ ಭದ್ರತೆ ಹಾಗೂ ರಾಷ್ಟ್ರೀಯ ಪ್ರತಿಭೆಗಳ ಅಭಿವೃದ್ಧಿಯಂತಹ ವಿಷಯಗಳು ಪ್ರಮುಖವಾಗಿವೆ.