ರಾಜತಾಂತ್ರಿಕ ಪ್ರಯತ್ನಗಳಿಗೆ ಇರಾನ್ ಸಿದ್ಧ; ಮಧ್ಯವರ್ತಿಗಳ ಜತೆ ಮಾತುಕತೆ ಮುಂದುವರಿಕೆ: ಅಬ್ಬಾಸ್ ಅರಾಘ್ಚಿ
ಹಾರ್ಮುಝ್ ಜಲಸಂಧಿ ತೆರೆಯಲು, ಪರಮಾಣು ಮಾತುಕತೆ ಪುನರಾರಂಭಕ್ಕೆ ಏಳು ದಿನಗಳ ಯೋಜನೆ
Photo : PTI
ಟೆಹರಾನ್: ದೇಶದ ರಕ್ಷಣೆಗೆ ಸಶಸ್ತ್ರ ಪಡೆಗಳನ್ನು ಸನ್ನದ್ಧವಾಗಿರಿಸಿರುವ ಇರಾನ್, ರಾಜತಾಂತ್ರಿಕ ಪ್ರಯತ್ನಗಳಿಗೂ ಅವಕಾಶ ನೀಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಮಧ್ಯವರ್ತಿಗಳೊಂದಿಗೆ ನಿಕಟ ಸಂಪರ್ಕ ಮುಂದುವರಿಸುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
‘ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸಲು ಸಂಪೂರ್ಣ ಸಿದ್ಧವಾಗಿವೆ. ಆದರೂ, ರಾಜತಾಂತ್ರಿಕ ಪ್ರಯತ್ನಗಳು ಯಶಸ್ವಿಯಾಗಲು ಅವಕಾಶ ನೀಡಲು ಇರಾನ್ ಬದ್ಧವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಏಳು ದಿನಗಳ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಮಧ್ಯವರ್ತಿಗಳೊಂದಿಗೆ ನಿಕಟ ಹಾಗೂ ನಿರಂತರ ಸಂಪರ್ಕದಲ್ಲಿರುತ್ತೇವೆ’ ಎಂದು ಅವರು ಹೇಳಿದ್ದಾರೆ.
ಏಳು ದಿನಗಳ ಯೋಜನೆಯೇನು?
ಇರಾನ್ ಕಳೆದ ತಿಂಗಳು ಏಳು ದಿನಗಳ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇರಾನ್ ನ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಅಮೆರಿಕ ತೆರವುಗೊಳಿಸುವುದು, ಇರಾನ್ ನ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದು ಹಾಗೂ ಲೆಬನಾನ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕದನ ವಿರಾಮ ಜಾರಿಗೊಳಿಸುವುದು ಈ ಯೋಜನೆಯ ಪ್ರಮುಖ ಷರತ್ತುಗಳಾಗಿದ್ದವು.
ಈ ಷರತ್ತುಗಳು ಈಡೇರಿದರೆ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಮತ್ತು ಒಂದು ವಾರದೊಳಗೆ ಪರಮಾಣು ಮಾತುಕತೆಗಳನ್ನು ಪುನರಾರಂಭಿಸಲು ಇರಾನ್ ಸಿದ್ಧವಿದೆ ಎಂದು ಖತರ್ ಮೂಲಕ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.