ಇಸ್ರೇಲ್ ಚುನಾವಣೆ | ಮತ ಎಣಿಕೆ ಬಹುತೇಕ ಪೂರ್ಣ; ನೆತನ್ಯಾಹು ಬಣಕ್ಕೆ 53, ವಿರೋಧ ಪಕ್ಷಗಳ ಬಣಕ್ಕೆ 67 ಸ್ಥಾನ
ಬೆಂಜಮಿನ್ ನೆತನ್ಯಾಹು | ಗಾಡಿ ಐಸೆನ್‌ಕೋಟ್ Photo: x.com/LilyRose10u
ಟೆಲ್ ಅವೀವ್: ಇಸ್ರೇಲ್ ನ ನೆಸೆಟ್ (ಸಂಸತ್ತು) ಚುನಾವಣೆಯಲ್ಲಿ ಶೇ. 88.62ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿದ್ದರೂ, ಸ್ಥಾನ ಹಂಚಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕೇಂದ್ರ ಚುನಾವಣಾ ಸಮಿತಿ ಘೋಷಿಸಿದೆ ಎಂದು theguardian.com ವರದಿ ಮಾಡಿದೆ.
ನೆತನ್ಯಾಹು ಪರ ಬಣವು 53 ಸ್ಥಾನಗಳನ್ನು ಹೊಂದಿದ್ದರೆ, ವಿರೋಧ ಪಕ್ಷಗಳ ಬಣವು 67 ಸ್ಥಾನಗಳನ್ನು ಪಡೆದಿದೆ. ವಿರೋಧ ಪಕ್ಷಗಳ ಬಣದ ಪೈಕಿ ಯಹೂದಿ ನೇತೃತ್ವದ ಪಕ್ಷಗಳು 48 ಸ್ಥಾನಗಳನ್ನು ಹಾಗೂ ಅರಬ್ ನೇತೃತ್ವದ ಪಕ್ಷಗಳು 19 ಸ್ಥಾನಗಳನ್ನು ಹೊಂದಿವೆ.
ಇನ್ನೂ, 'ಡಬಲ್ ಎನ್ವಲಪ್' (ಎರಡು ಲಕೋಟೆಗಳ) ವ್ಯವಸ್ಥೆಯಡಿ ಚಲಾವಣೆಯಾದ ಮತಗಳ ಸಂಖ್ಯೆ 4.30 ಲಕ್ಷದಿಂದ 4.80 ಲಕ್ಷದವರೆಗೆ ಇರಬಹುದು ಎಂದು ಚುನಾವಣಾ ಸಮಿತಿ ಅಂದಾಜಿಸಿದೆ. ಮಿಲಿಟರಿ ನೆಲೆಗಳು, ಜೈಲುಗಳು ಮತ್ತು ಆಸ್ಪತ್ರೆಗಳಂತಹ ವಿಶೇಷ ಮತದಾನ ಕೇಂದ್ರಗಳಲ್ಲಿ ಹಾಗೂ ರಾಜತಾಂತ್ರಿಕರು ಚಲಾಯಿಸಿದ ಈ ಮತಗಳ ಎಣಿಕೆ ಇನ್ನೂ ಬಾಕಿ ಇದೆ.
ಚುನಾವಣಾ ಸಮಿತಿಯ ವಕ್ತಾರರ ಪ್ರಕಾರ, ಬಾಕಿ ಇರುವ ಮತಗಳ ಎಣಿಕೆ ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆ ಸುಮಾರಿಗೆ ಆರಂಭವಾಗಲಿದ್ದು, ಗುರುವಾರ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.