×
Ad

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಬೆಂಗಾವಲು ಕಾರ್ಯಾಚರಣೆ: ಫ್ರಾನ್ಸ್ ಯೋಜನೆ

ಅಮೆರಿಕ-ಇಸ್ರೇಲ್ ಹೊತ್ತಿಸಿದ ಬೆಂಕಿಯ ನಡುವೆ ಪರಿಸ್ಥಿತಿ ಗಂಭೀರ ಎಂದ ಇರಾನ್

Update: 2026-03-09 23:16 IST

ಸಾಂದರ್ಭಿಕ ಚಿತ್ರ | Photo Credit : NDTV

ಪ್ಯಾರಿಸ್/ನಿಕೋಸಿಯಾ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಹಾರ್ಮುಜ್ ಜಲಸಂಧಿಯಲ್ಲಿ ‘ಬೆಂಗಾವಲು ಕಾರ್ಯಾಚರಣೆ’ ನಡೆಸುವ ಯೋಜನೆಯನ್ನು ಫ್ರಾನ್ಸ್ ಪರಿಗಣಿಸುತ್ತಿದೆ. ಮಿತ್ರ ರಾಷ್ಟ್ರಗಳಿಗೆ ರಕ್ಷಣಾತ್ಮಕ ಬೆಂಬಲ ಒದಗಿಸುವ ಭಾಗವಾಗಿ ಫ್ರಾನ್ಸ್, ತನ್ನ ವಿಮಾನವಾಹಕ ನೌಕೆಯನ್ನು ಒಳಗೊಂಡ ನೌಕಾ ಪಡೆ ಸೇರಿದಂತೆ ಹಲವು ಯುದ್ಧನೌಕೆಗಳನ್ನು ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರ, ಹಾರ್ಮುಜ್ ಜಲಸಂಧಿ ಪ್ರದೇಶಕ್ಕೆ ಕಳುಹಿಸಿದೆ ಎಂದು Aljazeera ವರದಿ ಮಾಡಿದೆ.

ಕಳೆದ ವಾರ ಡ್ರೋನ್ ದಾಳಿಗೆ ಗುರಿಯಾದ ಬಳಿಕ ಸೈಪ್ರಸ್ ನಲ್ಲಿ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, “ಸೈಪ್ರಸ್ ಮೇಲೆ ದಾಳಿ ನಡೆದರೆ ಅದು ಯುರೋಪ್ ಮೇಲೆ ನಡೆದ ದಾಳಿಯಂತೆಯೇ” ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಫ್ರಾನ್ಸ್ ಎಂಟು ಯುದ್ಧನೌಕೆಗಳು, ವಿಮಾನ ಹಾಗೂ ಎರಡು ಹೆಲಿಕಾಪ್ಟರ್ ಹೊತ್ತೊಯ್ಯುವ ನೌಕೆಯನ್ನು ಈ ಪ್ರದೇಶಕ್ಕೆ ನಿಯೋಜಿಸಲು ಮುಂದಾಗಿದೆ. ಸಂಘರ್ಷದ ಪರಿಣಾಮದಿಂದ ಜಾಗತಿಕ ವ್ಯಾಪಾರ ಸಾಗಣೆ ಮಾರ್ಗಗಳು ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳ ಭದ್ರತೆಯನ್ನು ಖಚಿತಪಡಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಕಂಟೇನರ್ ಹಡಗುಗಳು ಮತ್ತು ತೈಲ ಟ್ಯಾಂಕರ್ ಗಳಿಗೆ ಸುರಕ್ಷಿತ ಸಾಗಣೆಯನ್ನು ಒದಗಿಸುವ ಉದ್ದೇಶದಿಂದ, ಸಂಘರ್ಷದ ಅತ್ಯಂತ ತೀವ್ರ ಹಂತ ಮುಗಿದ ನಂತರ ಹಾರ್ಮುಜ್ ಜಲಸಂಧಿಯನ್ನು ಹಂತ ಹಂತವಾಗಿ ಪುನಃ ತೆರೆಯಲು ಬೆಂಗಾವಲು ವ್ಯವಸ್ಥೆಯನ್ನು ಆರಂಭಿಸಲು ಫ್ರಾನ್ಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ಯೋಜನೆ ರೂಪಿಸುತ್ತಿವೆ ಎಂದು ಮ್ಯಾಕ್ರನ್ ತಿಳಿಸಿದ್ದಾರೆ.

“ನಾವು ಸಂಪೂರ್ಣವಾಗಿ ರಕ್ಷಣಾತ್ಮಕ ಸ್ವರೂಪದ ಬೆಂಗಾವಲು ಕಾರ್ಯಾಚರಣೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇದನ್ನು ಯುರೋಪಿಯನ್ ಹಾಗೂ ಯುರೋಪಿಯನ್ ಅಲ್ಲದ ರಾಷ್ಟ್ರಗಳೊಂದಿಗೆ ಸಂಯೋಜಿಸಿ ಸಿದ್ಧಪಡಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗುಗಳು ಮತ್ತು ಟ್ಯಾಂಕರ್ ಗಳಿಗೆ ಸುರಕ್ಷಿತ ಬೆಂಗಾವಲು ಒದಗಿಸುವುದಾಗಿದೆ” ಎಂದು ಮ್ಯಾಕ್ರನ್ ಹೇಳಿದ್ದಾರೆ.

ಈ ಮಧ್ಯೆ, ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧ ಮುಂದುವರಿಯುತ್ತಿರುವವರೆಗೆ ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆಯನ್ನು ಪುನಃಸ್ಥಾಪಿಸುವುದು ಸಾಧ್ಯವಿಲ್ಲ ಎಂದು ಇರಾನ್ ನ ಭದ್ರತಾ ಮುಖ್ಯಸ್ಥ ಅರಿ ಲಾರಿಜಾನಿ ಪ್ರತಿಕ್ರಿಯಿಸಿದ್ದಾರೆ.

ಫ್ರಾನ್ಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ಕಾರ್ಯತಂತ್ರದ ಈ ಜಲಮಾರ್ಗವನ್ನು ಮತ್ತೆ ತೆರೆಯಲು ರಕ್ಷಣಾತ್ಮಕ ಕಾರ್ಯಾಚರಣೆಯನ್ನು ಸಿದ್ಧಪಡಿಸುತ್ತಿವೆ ಎಂಬ ಮ್ಯಾಕ್ರನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಈ ಪ್ರದೇಶದಲ್ಲಿ ಅಮೆರಿಕ ಮತ್ತು ಇಸ್ರೇಲ್ ಹೊತ್ತಿಸಿದ ಬೆಂಕಿಯ ಮಧ್ಯೆ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಭದ್ರತೆಯನ್ನು ಒದಗಿಸುವುದು ಅಸಾಧ್ಯ” ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡ ನಂತರ ಹಾರ್ಮುಜ್ ಜಲಸಂಧಿ ಸೇರಿದಂತೆ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಜಾಗತಿಕ ವ್ಯಾಪಾರ ಹಾಗೂ ತೈಲ ಸಾಗಣೆಗೆ ಆತಂಕ ಉಂಟಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News