ಸಾಂದರ್ಭಿಕ ಚಿತ್ರ (Photo: PTI)

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಲ್ಲಿರುವ ಹಾಗೂ ಅಲ್ಲಿಗೆ ಪ್ರಯಾಣಿಸಲು ಉದ್ದೇಶಿಸಿರುವ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಭಾರತ ಸರಕಾರ ಸಲಹೆ ನೀಡಿದೆ.

ಬುಧವಾರ ಹೊರಡಿಸಲಾದ ಸೂಚನೆಯಲ್ಲಿ, ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ದೊಡ್ಡ ಗುಂಪುಗಳು ಸೇರುವ ಸ್ಥಳಗಳು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ದೂರವಿರುವಂತೆ ಭಾರತೀಯರಿಗೆ ತಿಳಿಸಲಾಗಿದೆ.

“ಫ್ರಾನ್ಸ್‌ನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಿ. ಪ್ರತಿಭಟನೆಗಳು ನಡೆಯುತ್ತಿರುವ ಸ್ಥಳಗಳಲ್ಲಿ ದೊಡ್ಡ ಗುಂಪುಗಳು ಸೇರುವ ಪ್ರದೇಶಗಳು ಮತ್ತು ಜನದಟ್ಟಣೆಯ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಫ್ರಾನ್ಸ್‌ನ ಸ್ಥಳೀಯ ಅಧಿಕಾರಿಗಳು ಹೊರಡಿಸುವ ಸೂಚನೆಗಳನ್ನು ಪಾಲಿಸಿ” ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿಗಳ ಮೂಲಕ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಬೇಕು, ಫ್ರಾನ್ಸ್ ಸರಕಾರದ ಅಧಿಕೃತ ವೆಬ್‌ಸೈಟ್ (gouvernement.fr) ಮೂಲಕ ಪ್ರಕಟಣೆಗಳನ್ನು ಗಮನಿಸಬೇಕು ಹಾಗೂ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದೂ ಸಲಹೆ ನೀಡಲಾಗಿದೆ.

ತುರ್ತು ಸಂಪರ್ಕ ಸಂಖ್ಯೆಗಳ ಪ್ರಕಟಣೆ

ತುರ್ತು ಪರಿಸ್ಥಿತಿಯಲ್ಲಿ ಭಾರತೀಯರು ಸಂಪರ್ಕಿಸಬಹುದಾದ ವಿವರಗಳನ್ನು ರಾಯಭಾರ ಕಚೇರಿ ಬಿಡುಗಡೆ ಮಾಡಿದೆ.

ಭಾರತೀಯ ರಾಯಭಾರ ಕಚೇರಿ, ಪ್ಯಾರಿಸ್: +33 6 48 34 00 63, ಇಮೇಲ್: cons.paris@mea.gov.in, ಭಾರತದ ಕಾನ್ಸುಲೇಟ್ ಜನರಲ್, ಮಾರ್ಸೆಲೆ: +33 7 43 16 25 59, ಇಮೇಲ್: cgo.marseille@mea.gov.in ಗಳಿಗೆ ಸಂಪರ್ಕಿಸುವಂತೆ ಸೂಚಿಸಿದೆ.

ಗಲಭೆ ಮರುಕಳಿಸದಂತೆ ಕ್ರಮ: ಮ್ಯಾಕ್ರನ್ ಎಚ್ಚರಿಕೆ

ಕಳೆದ ವಾರಾಂತ್ಯದಲ್ಲಿ ನಡೆದ ಗಲಭೆ ಮತ್ತು ಲೂಟಿ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಬುಧವಾರ ಹೇಳಿದ್ದಾರೆ.

ಶನಿವಾರ ಪ್ಯಾರಿಸ್‌ನಲ್ಲಿ ‘ಯೆಲ್ಲೋ ವೆಸ್ಟ್ಸ್’ (ಹಳದಿ ಜಾಕೆಟ್‌ಗಳ ಚಳವಳಿ) ಸಂಘಟನೆ ಮತ್ತೆ ಬೃಹತ್ ಮೆರವಣಿಗೆ ನಡೆಸಲು ಯೋಜಿಸಿದೆ. ಇತ್ತೀಚೆಗೆ ಗಲಭೆ ನಡೆದ ಪ್ರದೇಶಗಳಲ್ಲೂ ಮೆರವಣಿಗೆ ನಡೆಯುವ ಸಾಧ್ಯತೆಯಿದೆ. ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಮುಂದಾಗುವವರನ್ನು ತಡೆಯಲಾಗುವುದು ಎಂದು ಮ್ಯಾಕ್ರನ್ ಎಚ್ಚರಿಸಿದ್ದಾರೆ.

ಈ ನಡುವೆ, ಬಿಕ್ಕಟ್ಟನ್ನು ಶಮನಗೊಳಿಸುವ ಉದ್ದೇಶದಿಂದ ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.

ಕಾರ್ಮಿಕ ಸಂಘಟನೆಗಳೊಂದಿಗೆ ನೇರ ಸಂಬಂಧ ಹೊಂದಿರದ ‘ಗಿಲೆ ಜೌನ್ಸ್’ (Gilets Jaunes) ಚಳವಳಿಯ ಪ್ರತಿನಿಧಿಯೊಬ್ಬರು ಪ್ಯಾರಿಸ್‌ನ ಪ್ರಮುಖ ಪ್ರದೇಶಗಳ ಮೂಲಕ ಮೆರವಣಿಗೆ ನಡೆಸಲು ಯೋಜನೆ ಸಲ್ಲಿಸಿದ್ದಾರೆ.

ಇದೇ ಶನಿವಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳೂ ಪ್ರತಿಭಟನೆ ನಡೆಸಲು ಮುಂದಾಗಿವೆ.

2018ರಲ್ಲಿ ಆರಂಭವಾದ ಯೆಲ್ಲೋ ವೆಸ್ಟ್ಸ್ ಚಳವಳಿ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಸಾರ್ವಜನಿಕ ಸೇವೆಗಳ ಕುಸಿತವನ್ನು ವಿರೋಧಿಸಿ ಹುಟ್ಟಿಕೊಂಡಿತ್ತು. ಇದೀಗ ಈ ಚಳವಳಿಯನ್ನು ಮತ್ತೆ ಬಲಪಡಿಸಲು ಕಾರ್ಯಕರ್ತರು ಮುಂದಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor