ಸುಡಾನ್: ಮಾರುಕಟ್ಟೆಯ ಮೇಲೆ ಡ್ರೋನ್ ದಾಳಿ; ಕನಿಷ್ಠ 153 ಮೃತ್ಯು
Photo Credit: theguardian
ಜುಬಾ, ಅ.21: ಸುಡಾನ್ ಮತ್ತು ದಕ್ಷಿಣ ಸುಡಾನ್ ನಡುವೆ ವಿವಾದಕ್ಕೊಳಗಾಗಿರುವ ಗಡಿ ಪ್ರದೇಶವಾದ ಅಬೈಯಿಯ ಮಾರುಕಟ್ಟೆಯ ಮೇಲಿನ ಡ್ರೋನ್ ದಾಳಿಯು ಹತ್ತಿರದ ಇಂಧನ ಡಿಪೋಗೆ ಅಪ್ಪಳಿಸಿದ್ದು, ಕನಿಷ್ಠ 153 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಬೈಯಿ ನಗರದ ಉತ್ತರದಲ್ಲಿರುವ ಅಮಿಯೆಟ್ ಮಾರುಕಟ್ಟೆಯ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಗೆ ಸುಡಾನ್ ಸೇನೆಯೇ ಕಾರಣ. 153 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ಇನ್ನೂ ಉರಿಯುತ್ತಿರುವುದರಿಂದ ಸಾವುನೋವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿ ಹೇಳಿದ್ದಾರೆ.
ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯವೂ ಸುಡಾನ್ ಸೇನೆಯನ್ನು ಹೊಣೆಗಾರರನ್ನಾಗಿ ಮಾಡಿದ್ದು, ಈ ದಾಳಿಯು ಮಾರುಕಟ್ಟೆಯ ಒಳಗಿನ ಹಲವು ಸ್ಥಳಗಳಿಗೆ ಅಪ್ಪಳಿಸಿ, ನಾಗರಿಕರ ಸಾವುನೋವುಗಳಿಗೆ ಮತ್ತು ಅಪಾರ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ ಎಂದು ಹೇಳಿದೆ.