ಶಾಂತಿ ಮಾತುಕತೆ ನಡೆಸದಿದ್ದರೆ ಕೆಟ್ಟ ಪರಿಣಾಮ: ಉಕ್ರೇನ್ ಗೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಅ.21: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಯುದ್ಧವನ್ನು ಅಂತ್ಯಗೊಳಿಸಲು ರಶ್ಯದೊಂದಿಗೆ ಮಾತುಕತೆಗೆ ಮುಂದಾಗಬೇಕು. ಇಲ್ಲದಿದ್ದರೆ, ಉಕ್ರೇನ್ಗೆ ಗಂಭೀರ ಪರಿಣಾಮಗಳು ಎದುರಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ರಶ್ಯದ ಮಿಲಿಟರಿ ಶಕ್ತಿ ಮತ್ತು ನಿರಂತರ ಮುನ್ನಡೆಯು ಅದನ್ನು ಬಲವಾದ ಸ್ಥಿತಿಯಲ್ಲಿರಿಸಿದೆ. ಹೀಗಾಗಿ, ಉಕ್ರೇನ್ ಒಪ್ಪಂದಕ್ಕೆ ಬರಲು ಸಿದ್ಧವಿರಬೇಕು. ಝೆಲೆನ್ಸ್ಕಿ ಈ ಯುದ್ಧವನ್ನು ಕೊನೆಗೊಳಿಸಲು ಇಷ್ಟಪಡಬೇಕು. ಒಂದು ವೇಳೆ ಅವರು ಹಾಗೆ ಮಾಡದಿದ್ದರೆ, ಅದು ಅತ್ಯಂತ ಕೆಟ್ಟ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.
ರಶ್ಯವು ತನ್ನ ಮಿಲಿಟರಿ ಅಭಿಯಾನವನ್ನು ಮುಂದುವರಿಸಲು ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವ ಶಕ್ತಿಶಾಲಿ ಪಡೆ. ರಶ್ಯ ಒಂದು ದೊಡ್ಡ ಯಂತ್ರವಿದ್ದಂತೆ. ಅವರು ಮುನ್ನುಗ್ಗುತ್ತಲೇ ಇರುತ್ತಾರೆ ಮತ್ತು ಅವರು ಅದನ್ನೇ ಮಾಡಿದ್ದಾರೆ. ಅವರು ಬಹಳ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ಬಳಿ ಅಪರಿಮಿತ ಸಂಖ್ಯಾಬಲವೂ ಇದೆ. ನಾವು ಉಕ್ರೇನ್ಗೆ ಅಗಾಧ ಪ್ರಮಾಣದ ನೆರವು ನೀಡಿದ್ದೇವೆ. ಆದರೆ, ಅದರಿಂದ ನಮಗೆ ಏನೂ ಮರಳಿ ಸಿಕ್ಕಿಲ್ಲ. ಅಮೆರಿಕದ ತೆರಿಗೆದಾರರು ಇದರಿಂದ ಸುಸ್ತಾಗಿದ್ದಾರೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು.
ಝೆಲೆನ್ಸ್ಕಿ ಇರದಿದ್ದರೂ ಸಹ, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಮತ್ತು ಜಾಗತಿಕ ಅಣ್ವಸ್ತ್ರ ರದ್ದತಿಯ ಕುರಿತು ಚರ್ಚಿಸಲು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಟ್ರಂಪ್ ಹೇಳಿದರು.
► ತ್ರಿಪಕ್ಷೀಯ ಸಭೆಗೆ ಝೆಲೆನ್ಸ್ಕಿ ಆಗ್ರಹ
ಉಕ್ರೇನ್, ರಶ್ಯ ಮತ್ತು ಅಮೆರಿಕ—ಈ ಮೂರು ದೇಶಗಳ ನಾಯಕರ ನಡುವೆ ತ್ರಿಪಕ್ಷೀಯ ಸಭೆ ನಡೆಸುವ ಆಲೋಚನೆಯನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮುಂದಿಟ್ಟಿದ್ದಾರೆ.
‘ಶಾಂತಿಯನ್ನು ಸ್ಥಾಪಿಸಲು ನಮ್ಮ ಬಳಿ ಕೆಲವು ಸ್ಪಷ್ಟ ಕಲ್ಪನೆಗಳಿವೆ. ಈ ನಿಟ್ಟಿನಲ್ಲಿ ನಾವು ನಮ್ಮ ಯುರೋಪಿಯನ್ ಪಾಲುದಾರರೊಂದಿಗೆ ಒಂದಾಗಿದ್ದೇವೆ ಮತ್ತು ಅಮೆರಿಕನ್ನರು ಈ ಆಲೋಚನೆಗಳನ್ನು ರಶ್ಯನ್ನರ ಬಳಿಗೆ ಕೊಂಡೊಯ್ಯಬೇಕೆಂದು ನಾವು ಬಯಸುತ್ತೇವೆ. ಕೇವಲ ನಾಯಕರು ಮಾತ್ರ ಪರಿಹರಿಸಬಹುದಾದ ವಿಷಯಗಳನ್ನು ಚರ್ಚಿಸಲು, ನಾಯಕರ ಮಟ್ಟದ ತ್ರಿಪಕ್ಷೀಯ ಸಭೆಗೆ ಹೆಜ್ಜೆ ಇಡುವುದು ಪ್ರಮುಖ ಆಲೋಚನೆಗಳಲ್ಲಿ ಒಂದಾಗಿದೆ. ಉಕ್ರೇನ್ ಮತ್ತು ನಮ್ಮ ಭವಿಷ್ಯದ ಬಗ್ಗೆ ನಡೆಯುವ ಯಾವುದೇ ಚರ್ಚೆಗಳಲ್ಲಿ ಉಕ್ರೇನ್ ಭಾಗಿಯಾಗಿರಲೇಬೇಕು. ಆಗ ಮಾತ್ರ ಅದು ಸ್ವೀಕಾರಾರ್ಹ. ಇದು ಸಂಪೂರ್ಣವಾಗಿ ಸ್ಪಷ್ಟವಾಗಿದೆ’ ಎಂದು ಝೆಲೆನ್ಸ್ಕಿ ಹೇಳಿದ್ದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.