'ನನ್ನ ಜಗತ್ತನ್ನೇ ಕಳೆದುಕೊಂಡೆ': ಅಮೆರಿಕದಲ್ಲಿ ಪತ್ನಿಯಿಂದಲೇ ಕೊಲೆಯಾದ 5 ವರ್ಷದ ಮಗಳಿಗಾಗಿ ಕಂಬನಿ ಮಿಡಿದ ಭಾರತೀಯ ತಂದೆ
ಅಂತ್ಯಕ್ರಿಯೆಗಾಗಿ 18,000 ಡಾಲರ್ ನೆರವು ಕೋರಿದ ಉಬರ್ ಚಾಲಕ
ನ್ಯೂಯಾರ್ಕ್: ‘ನಾನು ನನ್ನ ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದೆ. ಅವಳನ್ನು ಕಳೆದುಕೊಂಡಿರುವುದು ನನ್ನ ಇಡೀ ಜಗತ್ತನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ’. ಐದು ವರ್ಷದ ಮಗಳು ಫ್ಯಾಬಿಯಾನಾ ಕ್ಯಾಬೆಲ್ಲೊಳನ್ನು ಕಳೆದುಕೊಂಡ ಭಾರತೀಯ ಮೂಲದ ಉಬರ್ ಚಾಲಕ ಕುಲ್‌ದೀಪ್ ಸಿಂಗ್ ಅವರ ಈ ಮಾತುಗಳು ಮನಕಲಕುವಂತಿವೆ. ಮಗಳ ಅಂತ್ಯಕ್ರಿಯೆ ಮತ್ತು ದಫನ ಕಾರ್ಯದ ವೆಚ್ಚ ಭರಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಅವರು, 18,000 ಡಾಲರ್ ನೆರವು ಕೋರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದು gulfnews.com ವರದಿ ಮಾಡಿದೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ಅಕ್ಟೋಬರ್ 14ರಂದು ಮೃತಪಟ್ಟ ಫ್ಯಾಬಿಯಾನಾಳ ತಾಯಿಯೇ ಮಗಳನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿರುವುದು ಕುಟುಂಬವನ್ನು ತೀವ್ರ ದುಃಖಕ್ಕೆ ದೂಡಿದೆ ಎಂದು NDTV ವರದಿ ಮಾಡಿದೆ.
ಕುಲ್‌ದೀಪ್ ಸಿಂಗ್ ಅವರು 'ಗೋಫಂಡ್‌ಮೀ' (GoFundMe) ಮೂಲಕ ನಿಧಿಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಅಂತ್ಯಕ್ರಿಯೆ ಸಂಸ್ಥೆ ಮತ್ತು ಸ್ಮಶಾನದವರು ಕೇಳುತ್ತಿರುವ ತಕ್ಷಣದ ವೆಚ್ಚಗಳನ್ನು ಭರಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಮಗಳ ಸಾವಿನ ಆಘಾತದಿಂದ ಹೊರಬರುವ ಮುನ್ನವೇ ಆರ್ಥಿಕ ಸಂಕಷ್ಟ ಎದುರಾಗಿದೆ. ಬಾಡಿಗೆ ವಾಹನ ಬಳಸಿಕೊಂಡು ಉಬರ್ ಚಾಲಕರಾಗಿ ಕೆಲಸ ಮಾಡುತ್ತಿರುವ ಅವರು, ಈ ಕಷ್ಟದ ಸಮಯದಲ್ಲೂ ದುಡಿಮೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ.
‘ನಾನು ನನ್ನ ಮಗಳನ್ನು ಕೊಂದಿದ್ದೇನೆ’
'ದಿ ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಅಕ್ಟೋಬರ್ 14ರ ಸಂಜೆ ಕ್ವೀನ್ಸ್ ನ ರಿಚ್‌ಮಂಡ್ ಹಿಲ್ ನಲ್ಲಿರುವ ಮನೆಯೊಂದರಲ್ಲಿ ಹಲ್ಲೆ ನಡೆದಿರುವುದಾಗಿ ಮಹಿಳೆಯೊಬ್ಬರು 911 ಸಂಖ್ಯೆಗೆ ಕರೆ ಮಾಡಿದ್ದರು.
ಕರೆ ಮಾಡಿದ 32 ವರ್ಷದ ಫ್ರಾನ್ಸಿಸ್ ಕ್ಯಾಬೆಲ್ಲೊ, ತುರ್ತು ಸೇವಾ ನಿರ್ವಾಹಕರ ಬಳಿ ‘ನಾನು ನನ್ನ ಮಗಳನ್ನು ಕೊಂದಿದ್ದೇನೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಸಂಜೆ ಸುಮಾರು 6.55ರ ವೇಳೆಗೆ ಪೊಲೀಸರು ಮನೆಗೆ ಆಗಮಿಸಿದಾಗ, ಮಗು ಮೇಲಿನ ಮಹಡಿಯಲ್ಲಿದ್ದು ಉಸಿರಾಡುತ್ತಿಲ್ಲ ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ. ಸ್ಥಳಕ್ಕೆ ತಲುಪಿದ ಪೊಲೀಸರಿಗೆ ಫ್ಯಾಬಿಯಾನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಆಕೆಯ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು.
ಕೂಡಲೇ ಮಗುವನ್ನು ಜಮೈಕಾ ಆಸ್ಪತ್ರೆ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ಫ್ರಾನ್ಸಿಸ್ ಅವರನ್ನು ಬಂಧಿಸಿ, ಕೊಲೆ ಆರೋಪ ಹೊರಿಸಲಾಯಿತು.
ತುರ್ತು ಕರೆಗೂ ಮುನ್ನ ಮನೆಯೊಳಗೆ ನಿಖರವಾಗಿ ಏನಾಯಿತು ಎಂಬುದನ್ನು ಅಧಿಕಾರಿಗಳು ಈವರೆಗೆ ಬಹಿರಂಗಪಡಿಸಿಲ್ಲ.
ಶವಪರೀಕ್ಷೆಯಲ್ಲಿ ಉಸಿರುಗಟ್ಟುವಿಕೆಯ ಶಂಕೆ
'ಪೀಪಲ್' ನಿಯತಕಾಲಿಕಕ್ಕೆ ಲಭ್ಯವಾದ ಕ್ರಿಮಿನಲ್ ದೂರಿನ ಪ್ರಕಾರ, ಶವಪರೀಕ್ಷೆಯಲ್ಲಿ ಫ್ಯಾಬಿಯಾನಾಳ ಮುಖದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಆಕೆಯ ಕಣ್ಣುಗಳು, ಹೃದಯ ಮತ್ತು ಶ್ವಾಸಕೋಶಗಳಲ್ಲಿ ಪೆಟೆಕಿಯಾ (ರಕ್ತಸ್ರಾವದಿಂದ ಉಂಟಾಗುವ ಸಣ್ಣ ಚುಕ್ಕೆಗಳು) ಕಾಣಿಸಿಕೊಂಡಿವೆ.
ಈ ಲಕ್ಷಣಗಳು ಉಸಿರುಗಟ್ಟುವಿಕೆಗೆ ಸಂಬಂಧಿಸಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗುವಿನ ಸಾವಿನ ನಿಖರ ಕಾರಣ ಮತ್ತು ಸನ್ನಿವೇಶಗಳ ಕುರಿತು ತನಿಖೆ ಮುಂದುವರಿದಿದೆ.
‘ಅವಳು ಈ ರೀತಿ ಮಾಡುತ್ತಾಳೆಂದು ಭಾವಿಸಿರಲಿಲ್ಲ’
ದುರಂತಕ್ಕೂ ಮುನ್ನ ಮಗಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಫ್ರಾನ್ಸಿಸ್ ಕ್ಯಾಬೆಲ್ಲೊ ಅವರ ತಂದೆ ಫ್ರಾಂಕ್ಲಿನ್ ಕ್ಯಾಬೆಲ್ಲೊ 'ನ್ಯೂಯಾರ್ಕ್ ಪೋಸ್ಟ್'ಗೆ ತಿಳಿಸಿದ್ದಾರೆ.
ಮಗಳು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಳು ಮತ್ತು ಅಸಾಮಾನ್ಯವಾಗಿ ವರ್ತಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.
‘ಅವಳು ಈ ರೀತಿ ಮಾಡುತ್ತಾಳೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ’ ಎಂದು ಹೇಳಿದ ಅವರು, ಮಗಳನ್ನು ಹಿಂದೆ ಕಾಳಜಿಯುಳ್ಳ ಮತ್ತು ರಕ್ಷಣಾತ್ಮಕ ಸ್ವಭಾವದ ತಾಯಿ ಎಂದು ವಿವರಿಸಿದ್ದಾರೆ.
ಮುತ್ತಜ್ಜಿಗೆ ಆಸರೆಯಾಗಿದ್ದ ಪುಟ್ಟ ಬಾಲಕಿ
ಫ್ಯಾಬಿಯಾನಾಳನ್ನು ಕಳೆದುಕೊಂಡಿರುವುದು ಕುಟುಂಬದವರಿಗೆ ತೀವ್ರ ನೋವುಂಟುಮಾಡಿದೆ. ಆಕೆಯ ಪ್ರೀತಿ, ಮುಗ್ಧತೆ ಮತ್ತು ಇತರರ ಬಗ್ಗೆ ಕಾಳಜಿಯ ಗುಣಗಳನ್ನು ಸಂಬಂಧಿಕರು ನೆನಪಿಸಿಕೊಳ್ಳುತ್ತಿದ್ದಾರೆ.
ಕುಟುಂಬದ ಅಪಾರ್ಟ್‌ಮೆಂಟ್ ನ ಕೆಳಮಹಡಿಯಲ್ಲಿ ಹಿಂದೆ ವಾಸಿಸುತ್ತಿದ್ದ ಸಂಬಂಧಿ ಪುನ್‌ರಾಜ್ ಸಿಂಗ್, ಫ್ಯಾಬಿಯಾನಾಳನ್ನು ಪ್ರೀತಿಯ, ಸಂತೋಷದಾಯಕ ಮತ್ತು ಇತರರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮಗು ಎಂದು ಬಣ್ಣಿಸಿದ್ದಾರೆ.
ಹುರಿದ ಮೀನು, ದಾಲ್ ಪುರಿ, ರೊಟ್ಟಿ ಮತ್ತು ಕರಿ ಸೇರಿದಂತೆ ಆಕೆಗೆ ಇಷ್ಟವಾಗಿದ್ದ ಭಾರತೀಯ ಖಾದ್ಯಗಳನ್ನು ತಯಾರಿಸುವುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಫ್ಯಾಬಿಯಾನಾ ತನ್ನ ಮುತ್ತಜ್ಜಿಗೆ ಮನೆಯಲ್ಲಿ ಓಡಾಡಲು ಸಹಾಯ ಮಾಡುತ್ತಿದ್ದಳು. ಮೊಣಕಾಲು ನೋವು ಕಾಣಿಸಿಕೊಂಡಾಗ ಆಕೆಯ ಕೈ ಹಿಡಿದು ನಡೆಯಲು ನೆರವಾಗುತ್ತಿದ್ದಳು. ವೈದ್ಯರ ಭೇಟಿಯೊಂದರಲ್ಲಿ ತಾನು ಭೇಟಿಯಾದ ಪ್ರತಿಯೊಬ್ಬ ನರ್ಸ್ ನನ್ನೂ ಆಕೆ ಅಪ್ಪಿಕೊಂಡಿದ್ದಳು ಎಂದು ವರದಿಯಾಗಿದೆ.
‘ಯಾರೂ ಅವಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವಳು ತುಂಬಾ ಸುಂದರ ಮಗುವಾಗಿದ್ದಳು’ ಎಂದು ಪುನ್‌ರಾಜ್ ಸಿಂಗ್ 'ದಿ ನ್ಯೂಯಾರ್ಕ್ ಟೈಮ್ಸ್'ಗೆ ತಿಳಿಸಿದ್ದಾರೆ.
ಮಗುವಿನ ಸಾವಿನ ಕುರಿತು ತನಿಖೆ ಮುಂದುವರಿದಿರುವ ನಡುವೆ, ಮಗಳಿಗೆ ಗೌರವಯುತವಾಗಿ ಅಂತಿಮ ವಿದಾಯ ಹೇಳಲು ಕುಲ್‌ದೀಪ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ. ಮಗಳ ಅಗಲಿಕೆಯ ನೋವಿನ ಜತೆಗೆ ಅಂತ್ಯಕ್ರಿಯೆಯ ವೆಚ್ಚವನ್ನೂ ಭರಿಸಲಾಗದ ಸಂಕಷ್ಟ ಎದುರಿಸುತ್ತಿರುವ ತಂದೆ, 18,000 ಡಾಲರ್ ನೆರವಿಗಾಗಿ ಸಾರ್ವಜನಿಕರ ಮೊರೆ ಹೋಗಿದ್ದಾರೆ.
ಸೌಜನ್ಯ: Gulfnews.com