×
Ad

ಗಾಝಾದಲ್ಲಿ ಇಸ್ರೇಲ್‌ನಿಂದ ಜನಾಂಗೀಯ ನರಮೇಧ: ವಿಶ್ವಸಂಸ್ಥೆಯ ತನಿಖಾ ಆಯೋಗ ವರದಿ

ಆರೋಪ ತಳ್ಳಿಹಾಕಿದ ಇಸ್ರೇಲ್ ಆಡಳಿತ

Update: 2025-09-16 21:41 IST

PC : AP

ವಿಶ್ವಸಂಸ್ಥೆ,ಸೆ.16: ಗಾಝಾದಲ್ಲಿ ಇಸ್ರೇಲ್ ಸೇನೆ ಭೀಕರ ಜನಾಂಗೀಯ ನರಮೇಧವನ್ನು ಎಸಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಉನ್ನತ ಇಸ್ರೇಲಿ ಅಧಿಕಾರಿಗಳು ಇದಕ್ಕೆ ಪ್ರಚೋದನೆ ನೀಡಿದ್ದಾರೆಂದು ವಿಶ್ವಸಂಸ್ಥೆಯ ತನಿಖಾ ಆಯೋಗವು ಮಂಗಳವಾರ ಹೇಳಿದೆ.

ಗಾಝಾ ಪ್ರದೇಶದಲ್ಲಿ ಇಸ್ರೇಲ್ ಸೇನೆ ಎಸಗಿದ ಸಾಮೂಹಿಕ ನರಹತ್ಯೆಗಳು, ನೆರವು ಸಾಮಾಗ್ರಿಗಳ ಪೂರೈಕೆಗೆ ತಡೆ, ಬಲವಂತದ ಸ್ಥಳಾಂತರ ಹಾಗೂ ಪ್ರಜನನ ಕ್ಲಿನಿಕ್‌ ನ ಧ್ವಂಸ ಈ ಎಲ್ಲಾ ವಿದ್ಯಮಾನಗಳನ್ನು ತನಿಖಾ ಆಯೋಗವು ತನ್ನ ಆರೋಪಕ್ಕೆ ನಿದರ್ಶನವಾಗಿ ನೀಡಿದೆ.

‘ಗಾಝಾದಲ್ಲಿ ನರಮೇಧ ನಡೆಯುತ್ತಿದೆ. ಈ ದೌರ್ಜನ್ಯ ಮತ್ತು ಅಪರಾಧಗಳ ಹೊಣೆಯನ್ನು ಇಸ್ರೇಲ್‌ ನ ಉನ್ನತ ಸ್ತರದ ಅಧಿಕಾರಿಗಳು ಹೊರಬೇಕಾಗುತ್ತದೆ. ಇಂದಿಗೆ ಸರಿಸಮಾರು ಎರಡು ವರ್ಷಗಳಿಂದ ಈ ನರಮೇಧದ ಅಭಿಯಾನ ನಡೆಯುತ್ತಿದೆ. ಗಾಝಾದಲ್ಲಿ ಫೆಲೆಸ್ತೀನಿಯನ್ ಸಂಘಟನೆಯೊಂದನ್ನು ನಿರ್ಮೂಲಗೊಳಿಸುವ ನಿರ್ದಿಷ್ಟ ಉದ್ದೇಶದೊಂದಿಗೆ ಇಸ್ರೇಲ್ ಸರಿ ಸುಮಾರು ಎರಡು ವರ್ಷಗಳಿಂದ ಜನಾಂಗೀಯ ನರಮೇಧವನ್ನು ಆಯೋಜಿಸಿದೆ ಎಂದು ಆಕ್ರಮಿತ ಫೆಲೆಸ್ತೀನ್ ಪ್ರಾಂತದ ಕುರಿತ ತನಿಖಾ ಆಯೋಗದ ಮುಖ್ಯಸ್ಥೆ ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ನವಿ ಪಿಳ್ಳೈ ಹೇಳಿದ್ದಾರೆ.

ಆದರೆ ಆಯೋಗದ ತನಿಖೆಗೆ ಸಹಕರಿಸಲು ಇಸ್ರೇಲ್ ನಿರಾಕರಿಸಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ತನಿಖಾ ಸಮಿತಿಯು ರಾಜಕೀಯ ಕಾರ್ಯಸೂಚಿಯನ್ನು ಹೊಂದಿದೆಯೆಂದು ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಕಚೇರಿಯು ಆಪಾದಿಸಿದೆ.

ವಿಶ್ವಸಂಸ್ಥೆ ತನಿಖಾ ಆಯೋಗದ 72 ಪುಟಗಳ ಈ ವಿಶ್ಲೇಷಣಾತ್ಮಕ ವರದಿಯು ಈವರೆಗೆ ವಿಶ್ವಸಂಸ್ಥೆ ಪ್ರಕಟಿಸಿದಂತಹ ಅತ್ಯಂತ ಬಲವಾದ ತನಿಖಾ ವರದಿಯಾಗಿದೆ. ಆದರೆ ಈ ಆಯೋಗವು ಸ್ವತಂತ್ರ ಏಜೆನ್ಸಿಯಲ್ಲ ಹಾಗೂ ಅದು ವಿಶ್ವಸಂಸ್ಥೆಯ ಅಧಿಕೃತ ವಕ್ತಾರನಾಗಿ ಕಾರ್ಯನಿರ್ವಹಿಸುತ್ತಿಲ್ಲ.

ನೆತನ್ಯಾಹು ಹಾಗೂ ಇತರ ಇಸ್ರೇಲಿ ಉನ್ನತ ಅಧಿಕಾರಿಗಳ ಹೇಳಿಕೆಗಳು, ಆ ದೇಶವು ಜನಾಂಗೀಯ ನರಮೇಧ ಉದ್ದೇಶವನ್ನು ಹೊಂದಿದೆಯೆಂಬುದಕ್ಕೆ ಉಜ್ವಲ ನಿದರ್ಶನವಾಗಿದೆ ಎಂದು ಆಯೋಗವು ವರದಿಯಲ್ಲಿ ತಿಳಿಸಿದೆ.

ತನ್ನ ವಿರುದ್ಧದ ಜನಾಂಗೀಯ ನರಮೇಧದ ಆರೋಪಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾನೂನು ಸಮರವನ್ನು ನಡೆಸುತ್ತಿದೆ.

ಆಕ್ಟೋಬರ್ 7, 2023ರಲ್ಲಿ ತನ್ನ ನೆಲದಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ 1200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 251 ಮಂದಿ ಒತ್ತೆಯಾಳುಗಳನ್ನಾಗಿರಿಸಿದ ಘಟನೆಯ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಹೋರಾಡುವ ಹಕ್ಕನ್ನು ಹೊಂದಿದ್ದೇನೆ ಎಂದು ಅದು ಹೇಳಿದೆ.

ಹಮಾಸ್ ದಾಳಿಯ ಬಳಿಕ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಈವರೆಗೆ 64 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಝಾ ಪ್ರದೇಶದ ಒಂದು ಭಾಗವು ತೀವ್ರ ಕ್ಷಾಮಕ್ಕೆ ಸಿಲುಕಿದೆಯೆಂದು ಜಾಗತಿಕ ಹಸಿವು ಕಣ್ಗಾವಲು ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News