ಗಾಝಾ: ಇಸ್ರೇಲ್ ದಾಳಿಯಲ್ಲಿ ಪತ್ರಕರ್ತನ ಸಹಿತ 23 ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಗಾಝಾ: ಗಾಝಾ ಪಟ್ಟಿಯಲ್ಲಿ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಪತ್ರಕರ್ತನ ಸಹಿತ ಕನಿಷ್ಠ 23 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಉತ್ತರ ಗಾಝಾದ ಜಬಾಲಿಯಾದಲ್ಲಿ ಮನೆಯೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಸ್ಥಳೀಯ ಪತ್ರಕರ್ತ ಹಸನ್ ಮಜ್ದಿ ಅಬು ವಾರ್ಡಾ ಮತ್ತು ಅವರ ಕುಟುಂಬದ ಹಲವು ಸದಸ್ಯರು ಮೃತಪಟ್ಟಿದ್ದಾರೆ.
ಮಧ್ಯ ಗಾಝಾದ ನುಸೀರಾತ್ ಪ್ರದೇಶದಲ್ಲಿ ಮನೆಯೊಂದನ್ನು ಗುರಿಯಾಗಿಸಿ ನಡೆದ ಮತ್ತೊಂದು ದಾಳಿಯಲ್ಲಿ ಗಾಝಾದ ನಾಗರಿಕ ತುರ್ತು ಸೇವಾ ಇಲಾಖೆಯ ಹಿರಿಯ ಅಧಿಕಾರಿ ಅಶ್ರಫ್ ಅಬು ನಾರ್ ಮತ್ತು ಅವರ ಪತ್ನಿ ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಝಾದ ಖಾನ್ ಯೂನಿಸ್‍ನಲ್ಲಿ ನಡೆದ ದಾಳಿಯಲ್ಲಿ ಹಲವಾರು ಮಂದಿ ಸಾವನ್ನಪ್ಪಿರುವ ವರದಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಾಂತರಿಸುವ ಆದೇಶಗಳು ಅಥವಾ ಬಾಂಬ್ ಸ್ಫೋಟಗಳ ಮೂಲಕ ಸ್ಥಳೀಯ ನಿವಾಸಿಗಳನ್ನು ತಮ್ಮ ಮನೆಯಿಂದ ದೂರವಿರಿಸಿರುವ ಇಸ್ರೇಲ್ ಪಡೆಗಳು ಈಗ ಗಾಝಾದ 77% ಪ್ರದೇಶವನ್ನು ನಿಯಂತ್ರಣಕ್ಕೆ ಪಡೆದಿವೆ ಎಂದು ಹಮಾಸ್ ನಡೆಸುವ ಗಾಝಾ ಸರಕಾರದ ಮಾಧ್ಯಮ ಕಚೇರಿ ಹೇಳಿದೆ.