×
Ad

ಗಾಝಾ ಮೇಲಿನ ದಾಳಿ ಖಂಡಿಸಿ ಯುರೋಪ್‌ನಾದ್ಯಂತ ಪ್ರತಿಭಟನೆ: ಇಸ್ರೇಲ್ ವಿರುದ್ಧ ಜಾಗತಿಕ ಕ್ರಮಕ್ಕೆ ಆಗ್ರಹ

Update: 2025-11-30 16:31 IST

Photo Credit : aljazeera.com

ಹೊಸದಿಲ್ಲಿ,ನ.30: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧವನ್ನು ಖಂಡಿಸಿ ಮತ್ತು ಅದರ ನಿರಂತರ ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಜಾಗತಿಕ ಕ್ರಮಕ್ಕೆ ಆಗ್ರಹಿಸಿ ಯುರೋಪ್‌ನಾದ್ಯಂತ ಹಲವಾರು ನಗರಗಳಲ್ಲಿ ಲಕ್ಷಾಂತರ ಜನರು ಶನಿವಾರ ಪ್ರತಿಭಟನಾ ಜಾಥಾಗಳನ್ನು ನಡೆಸಿದರು.

ಫೆಲೆಸ್ತೀನ್‌ ಜನತೆಯೊಂದಿಗೆ ಒಗ್ಗಟ್ಟಿನ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಈ ಪ್ರತಿಭಟನೆಗಳು ನಡೆದವು. ಇದೇ ವೇಳೆ, ಗಾಝಾದಲ್ಲಿ ಇಸ್ರೇಲ್ ಯುದ್ಧದಿಂದ ಮೃತರ ಸಂಖ್ಯೆ 70,000ವನ್ನು ದಾಟಿದೆ. ಎಂಟು ಮತ್ತು ಹತ್ತರ ಹರೆಯದ ಇಬ್ಬರು ಬಾಲಕರು ಇತ್ತೀಚಿನ ಬಲಿಪಶುಗಳಾಗಿದ್ದಾರೆ. ಬನಿ ಸುಹೈಲಾದಲ್ಲಿ ಇಸ್ರೇಲ್‌ ಡ್ರೋನ್ ದಾಳಿಯಲ್ಲಿ ಈ ಎಳೆಯ ಜೀವಗಳು ಮೃತಪಟ್ಟಿವೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಸುಮಾರು 50,000 ಜನರು ‘ಗಾಝಾ, ಗಾಝಾ, ಪ್ಯಾರಿಸ್ ನಿಮ್ಮೊಂದಿಗಿದೆ’ ಮತ್ತು ‘ಪ್ಯಾರಿಸ್‌ನಿಂದ ಗಾಝಾಕ್ಕೆ ,ಪ್ರತಿರೋಧ’ ಎಂಬ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಇಸ್ರೇಲ್‌ ನರಮೇಧವನ್ನು ಖಂಡಿಸುತ್ತ ಫೆಲೆಸ್ತೀನ್ ಧ್ವಜಗಳನ್ನೂ ಬೀಸಿದರು.

ಅಲ್ ಜಝೀರಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರನೋರ್ವ,‘ಇದು ಸ್ವೀಕಾರಾರ್ಹವಲ್ಲ,ನಾವು ಇನ್ನೂ ನ್ಯಾಯ ಮತ್ತು ಉತ್ತರದಾಯಿತ್ವದಿಂದ ಬಹಳ ದೂರವಿದ್ದೇವೆ’ ಎಂದು ಹೇಳಿದರೆ, ‘ಇಸ್ರೇಲ್ ಯುದ್ಧವು ತಪ್ಪು ಎಂದು ಜನರಿಗೆ ತಿಳಿದಿದೆ. ಆದರೆ ಅಧಿಕಾರದಲ್ಲಿರುವ ಜನರಿಗೇಕೆ ಅದು ತಪ್ಪು ಎಂದು ಅನಿಸುತ್ತಿಲ್ಲ ಎಂದು ಇನ್ನೋರ್ವ ಪ್ರಶ್ನಿಸಿದ.

ಪ್ರತಿಭಟನೆಗೆ ಕರೆ ನೀಡಿದ್ದ ಸುಮಾರು 80 ಸರಕಾರೇತರ ಸಂಸ್ಥೆಗಳು, ಒಕ್ಕೂಟಗಳು ಮತ್ತು ಪಕ್ಷಗಳಲ್ಲಿ ಒಂದಾದ ಫ್ರಾನ್ಸ್ ಪ್ಯಾಲೆಸ್ತೀನ್‌ ಸಾಲಿಡಾರಿಟಿ ಅಸೋಸಿಯೇಷನ್‌ನ ಮುಖ್ಯಸ್ಥೆ ಆ್ಯನ್ನೆ ಟುವಾಲನ್ ಅವರು, ‘ಅ.10ರಂದು ಕದನ ವಿರಾಮ ಜಾರಿಗೊಂಡು ಏಳು ವಾರಗಳ ನಂತರವೂ ಯಾವುದೂ ಬಗೆಹರಿದಿಲ್ಲ. ಕದನ ವಿರಾಮಕ್ಕೆ ಯಾವುದೇ ಅರ್ಥವಿಲ್ಲ. ಇಸ್ರೇಲ್ ಅದನ್ನು ಪ್ರತಿದಿನವೂ ಉಲ್ಲಂಘಿಸುತ್ತಿದೆ, ಮಾನವೀಯ ನೆರವನ್ನು ನಿರ್ಬಂಧಿಸುತ್ತಿದೆ ಹಾಗೂ ಗಾಝಾದಲ್ಲಿ ಮನೆಗಳು ಮತ್ತು ಮೂಲಸೌಕರ್ಯ ನಾಶವನ್ನು ಮುಂದುವರಿಸಿದೆ. ಶಾಶ್ವತ ಕದನ ವಿರಾಮ ಮತ್ತು ನರಮೇಧ ಅಂತ್ಯಕ್ಕೆ ನಾವು ಕರೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಲಂಡನ್, ಜಿನಿವಾ, ರೋಮ್ ಮತ್ತು ಲಿಸ್ಬನ್‌ನಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಲಂಡನ್‌ನಲ್ಲಿ ಫೆಲೆಸ್ತೀನಿಗಳ ವಿರುದ್ಧ ಇಸ್ರೇಲ್‌ನ ಅಪರಾಧಗಳಿಗೆ ಉತ್ತರದಾಯಿತ್ವ ಮತ್ತು ಕದನವಿರಾಮದ ಹೊರತಾಗಿಯೂ ಈಗಲೂ ಇಸ್ರೇಲ್ ಮುತ್ತಿಗೆಯಡಿ ನರಳುತ್ತಿರುವವರ ರಕ್ಷಣೆಗಾಗಿ ಆಗ್ರಹಿಸಿ ಸುಮಾರು ಒಂದು ಲಕ್ಷ ಜನರು ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಇಟಲಿ ರಾಜಧಾನಿ ರೋಮ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ರಮಿತ ಫೆಲೆಸ್ತೀನ್‌ ಪ್ರದೇಶ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬಾನೀಸ್, ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಪಾಲ್ಗೊಂಡಿದ್ದರು.

ಇಸ್ರೇಲ್ ಗಾಝಾದಲ್ಲಿ ಮಾತ್ರವಲ್ಲ, ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಫೆಲೆಸ್ತೀನಿಗಳ ವಿರುದ್ಧ ನರಮೇಧವನ್ನು ನಡೆಸುತ್ತಿದೆ ಎಂದು ಅಲ್ಬಾನೀಸ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಒಪ್ಪಂದದ ಬಳಿಕ ಇಸ್ರೇಲ್ ಕನಿಷ್ಠ 500 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಇದರಿಂದಾಗಿ ಕನಿಷ್ಠ 347 ಫೆಲೆಸ್ತೀನಿಗಳು ಮೃತಪಟ್ಟಿದ್ದಾರೆ, 889 ಜನರು ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News