ಗ್ರೀನ್ ಲ್ಯಾಂಡ್ ಮೇಲಿನ ನಿಯಂತ್ರಣಕ್ಕೆ ವಿರೋಧ: ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI \ AP
ವಾಷಿಂಗ್ಟನ್: ಗ್ರೀನ್ ಲ್ಯಾಂಡ್ ಅನ್ನು ಅಮೆರಿಕ ವಶಕ್ಕೆ ಪಡೆಯುವ ಯೋಜನೆಯನ್ನು ಯೂರೋಪ್ ದೇಶಗಳು ವಿರೋಧಿಸುತ್ತಿರುವ ಕಾರಣಕ್ಕೆ ಅವುಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಫೆಬ್ರವರಿ 1ರಿಂದ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಹಾಗೂ ಇನ್ನಿತರ ಯೂರೋಪ್ ದೇಶಗಳ ಮೇಲೆ ಅಮೆರಿಕದ ಸುಂಕ ಜಾರಿಗೆ ಬರಲಿದೆ.
ಈ ಕುರಿತು ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕವು ಗ್ರೀನ್ ಲ್ಯಾಂಡ್ ಅನ್ನು ಸಂಪೂರ್ಣವಾಗಿ ಹಾಗೂ ಒಟ್ಟು ಮೊತ್ತಕ್ಕೆ ಖರೀದಿಸುವ ವ್ಯವಹಾರವು ಅಂತಿಮಗೊಳ್ಳದಿದ್ದರೆ, ಜೂನ್ ಒಂದರಿಂದ ಈ ಸುಂಕ ಶೇ. 25ಕ್ಕೆ ಏರಿಕೆಯಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಗ್ರೀನ್ ಲ್ಯಾಂಡ್ ಯೋಜನೆಗೆ ಬೆಂಬಲಿಸದ ದೇಶಗಳ ವಿರುದ್ಧ ಸುಂಕ ಹೇರಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಿಗೇ ಈ ನಿರ್ಧಾರ ಹೊರಬಿದ್ದಿದೆ.