ನೊಬೆಲ್ ಪ್ರಶಸ್ತಿ ಹಿಂತೆಗೆದುಕೊಳ್ಳಲು ಅವಕಾಶವಿದೆಯಾ? ನೊಬೆಲ್ ಪ್ರತಿಷ್ಠಾನದ ನಿಯಮಾವಳಿ ಏನು ಹೇಳುತ್ತದೆ?
ಪದಕ ಮಾರಾಟವಾದರೂ ಪ್ರಶಸ್ತಿ ವಿಜೇತರ ಗುರುತು ಶಾಶ್ವತ!
Image Credit: X/@WhiteHouse
ಓಸ್ಲೋ: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದವರು ಇತಿಹಾಸದಲ್ಲಿ ಸದಾಕಾಲ ಮೂಲ ಪ್ರಶಸ್ತಿ ವಿಜೇತರಾಗಿಯೇ ಉಳಿಯುತ್ತಾರೆ. ಪ್ರಶಸ್ತಿ ನೀಡುವ ವೇಳೆ ಲಭಿಸುವ ಚಿನ್ನದ ಪದಕ, ನಗದು ಬಹುಮಾನಕ್ಕೆ ನಂತರ ಏನೇ ಆದರೂ, ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು ಎಂಬ ವಿಚಾರದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ನೊಬೆಲ್ ಪ್ರತಿಷ್ಠಾನ ತಿಳಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ಚಿನ್ನದ ಪದಕ ಹಾಗೂ ಬಹುಮಾನದ ಹಣವನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ವಸ್ತುಗಳು ಕಾಲಾಂತರದಲ್ಲಿ ಮತ್ತೊಬ್ಬರ ಸ್ವಾಧೀನಕ್ಕೆ ಬಂದರೂ ಸಹ, ಪ್ರಶಸ್ತಿ ಹಕ್ಕು ಮೂಲ ಪುರಸ್ಕೃತರಲ್ಲೇ ಉಳಿಯುತ್ತದೆ. ಪ್ರಶಸ್ತಿ ಘೋಷಣೆಯ ಬಳಿಕ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅಥವಾ ವರ್ಗಾಯಿಸಲು ಅವಕಾಶವಿಲ್ಲ. ಒಮ್ಮೆ ನೀಡಲಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ನಾರ್ವೇಜಿಯನ್ ನೊಬೆಲ್ ಸಮಿತಿಯ ನಿರ್ಧಾರ ಅಂತಿಮವಾಗಿದ್ದು, ಅದು ಶಾಶ್ವತವಾಗಿ ಅನ್ವಯಿಸುತ್ತದೆ.
ಪ್ರಶಸ್ತಿ ನೀಡಿದ ನಂತರ ಪುರಸ್ಕೃತರ ರಾಜಕೀಯ ಹೇಳಿಕೆಗಳು, ಕ್ರಮಗಳು ಅಥವಾ ನಿರ್ಧಾರಗಳ ಕುರಿತು ಪ್ರತಿಕ್ರಿಯಿಸುವುದು ನಾರ್ವೇಜಿಯನ್ ನೊಬೆಲ್ ಸಮಿತಿಯ ಪಾತ್ರವಲ್ಲ. ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಆ ಕಾಲಘಟ್ಟದ ಕೊಡುಗೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ನಂತರದ ನಡೆಗಳಿಗೆ ಪುರಸ್ಕೃತರೇ ಜವಾಬ್ದಾರರು ಎಂದು ಸಮಿತಿ ಸ್ಪಷ್ಟಪಡಿಸಿದೆ.
ನೊಬೆಲ್ ಪ್ರತಿಷ್ಠಾನದ ನಿಯಮಾವಳಿಗಳ ಪ್ರಕಾರ, ಪದಕ ಅಥವಾ ಬಹುಮಾನದ ಹಣವನ್ನು ಹೇಗೆ ಬಳಸಬೇಕು ಎಂಬುದರ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ, ಪ್ರಶಸ್ತಿ ವಿಜೇತರು ಅವುಗಳನ್ನು ಇಟ್ಟುಕೊಳ್ಳಬಹುದು, ದಾನ ಮಾಡಬಹುದು, ಮಾರಾಟ ಮಾಡಬಹುದು ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ನೀಡಬಹುದು.
► ದಾನ ಮತ್ತು ಹರಾಜಾದ ನೊಬೆಲ್ ಪದಕಗಳು
ಪ್ರಪಂಚದ ವಿವಿಧ ವಸ್ತುಸಂಗ್ರಹಾಲಯಗಳಲ್ಲಿ ಅನೇಕ ನೊಬೆಲ್ ಪದಕಗಳು ಪ್ರದರ್ಶನದಲ್ಲಿಡಲಾಗಿದೆ. ಕೆಲವು ಪ್ರಮುಖ ಉದಾಹರಣೆಗಳು ಹೀಗಿವೆ:
2001ರ ಶಾಂತಿ ಪ್ರಶಸ್ತಿ ವಿಜೇತ ಕೋಫಿ ಅನ್ನಾನ್ ಅವರ ಪದಕ ಮತ್ತು ಪದವಿಯನ್ನು 2024ರ ಫೆಬ್ರವರಿಯಲ್ಲಿ ಅವರ ಪತ್ನಿ ನೇನ್ ಅನ್ನಾನ್ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗೆ ದಾನ ಮಾಡಿದ್ದಾರೆ.
1921ರ ಶಾಂತಿ ಪ್ರಶಸ್ತಿ ಪುರಸ್ಕೃತ ಕ್ರಿಶ್ಚಿಯನ್ ಲೌಸ್ ಲ್ಯಾಂಗ್ ಅವರ ಪದಕವನ್ನು ಓಸ್ಲೋದಲ್ಲಿರುವ ನೊಬೆಲ್ ಶಾಂತಿ ಕೇಂದ್ರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.
2021ರ ಶಾಂತಿ ಪ್ರಶಸ್ತಿ ವಿಜೇತ ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ ತಮ್ಮ ಪದಕವನ್ನು 2022ರಲ್ಲಿ USD 103.5 ಮಿಲಿಯನ್ ಗೆ ಮಾರಾಟ ಮಾಡಿ, ಸಂಪೂರ್ಣ ಮೊತ್ತವನ್ನು ಉಕ್ರೇನಿಯನ್ ನಿರಾಶ್ರಿತರ ಮಕ್ಕಳಿಗಾಗಿ ಯುನಿಸೆಫ್ ನಿಧಿಗೆ ದಾನ ಮಾಡಿದ್ದಾರೆ.
ಭೌತಶಾಸ್ತ್ರ ವಿಭಾಗದ 2016ರ ನೊಬೆಲ್ ವಿಜೇತ ಡೇವಿಡ್ ಥೌಲೆಸ್ ಅವರ ಕುಟುಂಬವು ಪದಕವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಹಾಲ್ ಗೆ ದಾನ ಮಾಡಿದೆ.
1962ರ ವೈದ್ಯಕೀಯ ನೊಬೆಲ್ ವಿಜೇತ ಜೇಮ್ಸ್ ವ್ಯಾಟ್ಸನ್ ಅವರ ಪದಕವನ್ನು 2014ರಲ್ಲಿ ಹರಾಜು ಮಾಡಲಾಗಿದ್ದು, ನಂತರ ಅದನ್ನು ಖರೀದಿಸಿದವರು ಮತ್ತೆ ಅವರಿಗೆ ಹಿಂತಿರುಗಿಸಿದ್ದರು.
1988ರ ಭೌತಶಾಸ್ತ್ರ ನೊಬೆಲ್ ವಿಜೇತ ಲಿಯಾನ್ ಲೆಡರ್‌ಮನ್ ವೈದ್ಯಕೀಯ ವೆಚ್ಚಗಳಿಗಾಗಿ ತಮ್ಮ ಪದಕವನ್ನು ಮಾರಾಟ ಮಾಡಿದ್ದರು.
1920ರ ಸಾಹಿತ್ಯ ನೊಬೆಲ್ ವಿಜೇತ ನಟ್ ಹ್ಯಾಮ್ಸನ್ 1943ರಲ್ಲಿ ತಮ್ಮ ಪದಕವನ್ನು ಜರ್ಮನಿಯ ಸಚಿವ ಜೋಸೆಫ್ ಗೋಬೆಲ್ಸ್ ಅವರಿಗೆ ಉಡುಗೊರೆಯಾಗಿ ಕಳುಹಿಸಿದ್ದರು. ಆ ಪದಕದ ಪ್ರಸ್ತುತ ಎಲ್ಲಿದೆ ಎಂದು ತಿಳಿದಿಲ್ಲ.
► ನೊಬೆಲ್ ಚಿನ್ನದ ಪದಕ
ನೊಬೆಲ್ ಶಾಂತಿ ಪ್ರಶಸ್ತಿ ಪದಕವು 18 ಕ್ಯಾರೆಟ್ ಚಿನ್ನದಿಂದ ತಯಾರಿಸಲ್ಪಟ್ಟಿದ್ದು, ಸುಮಾರು 196 ಗ್ರಾಂ ತೂಕ ಹಾಗೂ 6.6 ಸೆಂಟಿಮೀಟರ್ ವ್ಯಾಸ ಹೊಂದಿದೆ. ಪದಕದ ಮುಂಭಾಗದಲ್ಲಿ ಆಲ್ಫ್ರೆಡ್ ನೊಬೆಲ್ ಅವರ ಭಾವಚಿತ್ರವಿದ್ದು, ಹಿಂಭಾಗದಲ್ಲಿ ಮಾನವ ಭ್ರಾತೃತ್ವವನ್ನು ಸಂಕೇತಿಸುವ ಮೂವರು ಪುರುಷರ ಚಿತ್ರವಿದೆ. ‘ಪ್ರೊ ಪೇಸ್ ಎಟ್ ಫ್ರಾಟರ್ನಿಟಾಟೆ ಜೆಂಟಿಯಮ್’ ಎಂಬ ಲ್ಯಾಟಿನ್ ವಾಕ್ಯವು ‘ಶಾಂತಿ ಮತ್ತು ರಾಷ್ಟ್ರಗಳ ಭ್ರಾತೃತ್ವಕ್ಕಾಗಿ’ ಎಂಬ ಅರ್ಥ ನೀಡುತ್ತದೆ.