Photo: Reuters

ಬರ್ಲಿನ್: ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಜೀವನ ವೆಚ್ಚ ಏರಿಕೆಗೆ ಪರಿಹಾರ ಹಾಗೂ ಕಡ್ಡಾಯ ಮಿಲಿಟರಿ ಸೇವೆಗೆ ವಿರೋಧ ವ್ಯಕ್ತಪಡಿಸಿ ಜರ್ಮನಿಯ ಪ್ರಮುಖ ನಗರಗಳಲ್ಲಿ ಶನಿವಾರ ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಫ್ರಾಂಕ್‌ಫರ್ಟ್‌ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೆಲವು ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ವರದಿಯಾಗಿದೆ.

‘Gen Z regelt’ (ಜನರೇಷನ್ ಝಡ್ ಜವಾಬ್ದಾರಿ ತೆಗೆದುಕೊಳ್ಳುತ್ತದೆ) ಎಂಬ ಅಭಿಯಾನದ ನೇತೃತ್ವದಲ್ಲಿ ಬರ್ಲಿನ್, ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಚ್ ಸೇರಿದಂತೆ ಜರ್ಮನಿಯ 34 ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಶಿಕ್ಷಣ, ಆರೋಗ್ಯ ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಯುವಕರಿಗೆ ಆರ್ಥಿಕ ಭದ್ರತೆ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಫ್ರಾಂಕ್‌ಫರ್ಟ್‌ನಲ್ಲಿ ಕನಿಷ್ಠ ಎರಡು ಅಂಗಡಿಗಳನ್ನು ಲೂಟಿ ಮಾಡಲಾಗಿದ್ದು, ಹಲವು ಅಂಗಡಿಗಳಿಗೆ ಹಾನಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ನಗರದ ಕೇಂದ್ರ ಭಾಗದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

‘ಹಿಂಸಾತ್ಮಕ ಘಟನೆಗಳು ಮುಂದುವರಿದಿವೆ. ನಗರದ ಕೇಂದ್ರ ಭಾಗದಲ್ಲಿರುವ ಹಲವು ಅಂಗಡಿಗಳ ಕಿಟಕಿ ಗಾಜುಗಳನ್ನು ಒಡೆಯಲಾಗಿದೆ. ತುರ್ತು ಸೇವೆಗಳ ಸಿಬ್ಬಂದಿಯ ಮೇಲೂ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗುತ್ತಿದೆ. ಸಾರ್ವಜನಿಕರು ನಗರದ ಕೇಂದ್ರ ಭಾಗಕ್ಕೆ ಬರುವುದನ್ನು ತಪ್ಪಿಸಬೇಕು ಅಥವಾ ಅಲ್ಲಿಂದ ತೆರಳಬೇಕು’ ಎಂದು ಫ್ರಾಂಕ್‌ಫರ್ಟ್ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹ್ಯಾಂಬರ್ಗ್‌ನಲ್ಲಿ ಕೆಲವು ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿದ್ದರೂ, ತೀವ್ರಗಾಮಿ ಗುಂಪುಗಳು ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಜರ್ಮನ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕಡ್ಡಾಯ ಮಿಲಿಟರಿ ಸೇವೆಗೆ ವಿರೋಧ

ಯುವಕರನ್ನು ಒಗ್ಗೂಡಿಸಿರುವ ಈ ಅಭಿಯಾನವು ಕಡ್ಡಾಯ ಮಿಲಿಟರಿ ಸೇವೆಯನ್ನು ವಿರೋಧಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಇತರ ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ಹೂಡಿಕೆ ಮಾಡುವಂತೆ ಆಗ್ರಹಿಸುತ್ತಿದೆ. ಯುರೋಪ್‌ನ ಅತಿದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯಲ್ಲಿ ಜೀವನ ವೆಚ್ಚ ಹೆಚ್ಚುತ್ತಿರುವುದರಿಂದ ಯುವಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

‘ಯುದ್ಧ ಮತ್ತು ಬಲವಂತದ ಬದಲಿಗೆ ಶಾಂತಿ ಹಾಗೂ ಸ್ವಾತಂತ್ರ್ಯಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳಿಗೆ ಹೆಚ್ಚಿನ ಬೆಂಬಲ ನೀಡುವುದು ನಮಗೆ ಅತ್ಯಂತ ಮುಖ್ಯ. ಕಡ್ಡಾಯ ಮಿಲಿಟರಿ ಸೇವೆಯನ್ನು ನಾವು ವಿರೋಧಿಸುತ್ತೇವೆ. ಹೊರೆ ಎಲ್ಲರಿಗೂ ನ್ಯಾಯಯುತವಾಗಿ ಹಂಚಿಕೆಯಾಗಬೇಕು’ ಎಂದು ಬರ್ಲಿನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ‘Gen Z regelt’ ವಕ್ತಾರೆ ಲೀನಾ ಫ್ರೆಡ್ರಿಕ್ ಹೇಳಿದ್ದಾರೆ.

ಪ್ರತಿಭಟನಾಕಾರರ ಸಂಖ್ಯೆ ಸಂಘಟಕರು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿತ್ತು. ಸುಮಾರು 1.82 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಅಂದಾಜಿಸಿದ್ದರು. ಆದರೆ ಫ್ರಾಂಕ್‌ಫರ್ಟ್, ಮ್ಯೂನಿಚ್ ಮತ್ತು ಬರ್ಲಿನ್ ನಗರಗಳಲ್ಲಿನ ಪ್ರತಿಭಟನೆಗಳಲ್ಲಿ ಒಟ್ಟಾರೆ ಸುಮಾರು 18 ಸಾವಿರ ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಘಟನೆಯ ವೆಬ್‌ಸೈಟ್‌ನಲ್ಲಿ 36 ಸಾವಿರ ಜನರು ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor