ಡೊನಾಲ್ಡ್ ಟ್ರಂಪ್ | Photo : PTI

 

ಫ್ಲೋರಿಡಾ: ಇರಾನ್ ಅಮೆರಿಕದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳಲು ಬಯಸುತ್ತಿದ್ದು, ಉಭಯ ದೇಶಗಳ ನಡುವಿನ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.

ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿದೆ. ಆದರೆ, ಆ ದೇಶದ ಮಾತುಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

'ಇರಾನಿಯನ್ನರು ಅಷ್ಟೊಂದು ನಂಬಲಾರ್ಹರಲ್ಲ. ಅವರು ಒಪ್ಪಂದ ಮಾಡಿಕೊಳ್ಳುತ್ತಾರೆ. ನಂತರ ಅದರಿಂದ ಹಿಂದೆ ಸರಿಯುತ್ತಾರೆ. ಈಗ ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಆದರೆ, ಅವರು ನಿಜವಾಗಿಯೂ ಒಪ್ಪಂದ ಮಾಡಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡೋಣ' ಎಂದು ಟ್ರಂಪ್ ಹೇಳಿದರು.

ಖತರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಗಳಿಗೆ ನಿಗದಿಪಡಿಸಿರುವ ಕಾಲಮಿತಿಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, 'ನಮಗೆ ಅಷ್ಟೇನೂ ಆತುರವಿಲ್ಲ' ಎಂದು ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಇರಾನ್‌ ನ ನೌಕಾಪಡೆ, ವಾಯುಪಡೆ ಹಾಗೂ ಉತ್ಪಾದನಾ ಸಾಮರ್ಥ್ಯಗಳನ್ನು ಅಮೆರಿಕ ನಾಶಪಡಿಸಿದೆ ಎಂದು ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದರು.

ಇರಾನ್‌ ನಲ್ಲಿರುವ ಪರಮಾಣು ತಾಣವೆಂದು ಅಮೆರಿಕ ಗುರುತಿಸಿರುವ 'ಪಿಕ್ ಆಕ್ಸ್ ಮೌಂಟೇನ್' (Pick Axe Mountain) ಮೇಲೂ ದಾಳಿ ನಡೆಸುವುದಾಗಿ ಅವರು ಮತ್ತೊಮ್ಮೆ ಬೆದರಿಕೆ ಹಾಕಿದರು.

'ಇರಾನ್‌ ನಲ್ಲಿ ಉಳಿದಿರುವ ಒಂದು ಅಥವಾ ಎರಡು ಪರಮಾಣು ತಾಣಗಳನ್ನು ಕೇವಲ 10 ನಿಮಿಷಗಳಲ್ಲಿ ನಾಶಪಡಿಸಲು ನಮಗೆ ಸಾಧ್ಯವಿದೆ' ಎಂದು ಹೇಳಿದರು.

ಇರಾನ್ ಮೇಲೆ ಮತ್ತೆ ದಾಳಿ ನಡೆಸಲು ಆದೇಶಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದನ್ನು 'ಮೂರ್ಖತನದ ಪ್ರಶ್ನೆ' ಎಂದ ಟ್ರಂಪ್, 'ಒಂದು ವೇಳೆ ನಾನು ಅಂತಹ ಆದೇಶ ನೀಡಿದ್ದರೂ ಅದನ್ನು ನಿಮಗೆ ಹೇಳುತ್ತೇನೆಯೇ? ಈ ಬಗ್ಗೆ ನಿಮಗೆ ಮಾಹಿತಿ ನೀಡಲು ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor