ಡೊನಾಲ್ಡ್ ಟ್ರಂಪ್ | Photo : PTI

ವಾಷಿಂಗ್ಟನ್: ಇರಾನ್‌ ನೊಂದಿಗಿನ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ಯಾವುದೇ ಆತುರದಲ್ಲಿಲ್ಲ. ಸಂಘರ್ಷ ಮುಂದುವರಿದರೂ ಅಮೆರಿಕಕ್ಕೆ ಸಾಕಷ್ಟು ಸಮಯವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಇದು ಸಾಮಾನ್ಯ ಯುದ್ಧವಲ್ಲ. ನಾವು ಏಳು ತಿಂಗಳಿನಿಂದ ಈ ಸಂಘರ್ಷದಲ್ಲಿ ತೊಡಗಿದ್ದೇವೆ’ ಎಂದು ಹೇಳಿರುವ ಅವರು, ಇರಾನ್ ವಿರುದ್ಧ ಮತ್ತೊಂದು ಮಿಲಿಟರಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ.

‘ಮಾತುಕತೆಗಳು ನಡೆಯುತ್ತಿವೆ. ಇರಾನ್ ಮಾತುಕತೆ ನಡೆಸಲು ಬಯಸಿದೆ. ಮಾತುಕತೆ ಮುಂದುವರಿಸಲಿದ್ದಾರೆ. ಆದರೆ, ತಮ್ಮ ಸೈನಿಕರಿಗೆ ಮತ್ತು ಪೊಲೀಸರಿಗೆ ವೇತನ ನೀಡುತ್ತಿಲ್ಲ. ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮಗೆ ಸಾಕಷ್ಟು ಸಮಯವಿದೆ’ ಎಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇರಾನ್ ವಿರುದ್ಧದ ಸಂಘರ್ಷಕ್ಕೆ ಅಮೆರಿಕ ತುಲನಾತ್ಮಕವಾಗಿ ಕಡಿಮೆ ಹಣ ವ್ಯಯಿಸುತ್ತಿದೆ ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ. ‘ನಾವು ಖರ್ಚು ಮಾಡಿದ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ವೆನೆಝುವೆಲಾದಿಂದ ಗಳಿಸಿದ್ದೇವೆ’ ಎಂದು ಹೇಳಿದ ಅವರು, ಈ ಹೇಳಿಕೆಗೆ ಪೂರಕವಾಗಿ ಯಾವುದೇ ಅಂಕಿಅಂಶಗಳನ್ನು ನೀಡಿಲ್ಲ.

ಮತ್ತೊಂದು ಮಿಲಿಟರಿ ಕಾರ್ಯಾಚರಣೆಯ ಸುಳಿವು

ಇರಾನ್ ವಿರುದ್ಧ ಮತ್ತೆ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಟ್ರಂಪ್ ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ. ಕಳೆದ ವಾರ ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಉಲ್ಲೇಖಿಸಿ, ಅಮೆರಿಕ ಮತ್ತೊಂದು ಸಣ್ಣ ಪ್ರಮಾಣದ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಎಂದು ಹೇಳಿದ್ದರು. ಮತ್ತೊಂದು ಸಂದರ್ಭದಲ್ಲಿ ಇರಾನ್‌ ನೊಂದಿಗೆ ‘ದೊಡ್ಡ ಮತ್ತು ಉತ್ತಮ’ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದರು.

ಇರಾನ್ ಒಪ್ಪಂದ ಬಯಸುತ್ತಿದೆ ಎಂದು ಟ್ರಂಪ್ ಹೇಳಿದ್ದರೂ, ಅದರ ಷರತ್ತುಗಳ ಕುರಿತು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಭಿನ್ನಾಭಿಪ್ರಾಯಗಳಿವೆ. ಇರಾನ್‌ನ ಪರಮಾಣು ಕಾರ್ಯಕ್ರಮ, ಅದರ ಮೇಲಿನ ನಿರ್ಬಂಧಗಳು ಹಾಗೂ ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಪ್ರಮುಖ ವಿವಾದದ ವಿಷಯಗಳಾಗಿವೆ.

ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ರಾಜತಾಂತ್ರಿಕ ಪ್ರಯತ್ನಗಳು ಶುಕ್ರವಾರವೂ ಮುಂದುವರಿದವು. ಅಮೆರಿಕದಲ್ಲಿ ನಡೆದ ಜಿ20 ವಿದೇಶಾಂಗ ಸಚಿವರ ಸಭೆಯ ಸಂದರ್ಭದಲ್ಲಿ ತುರ್ಕಿಯೆ ವಿದೇಶಾಂಗ ಸಚಿವ ಹಕನ್ ಫಿದಾನ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿಯಾದರು.

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳು, ಗಾಝಾದ ಪರಿಸ್ಥಿತಿ, ರಷ್ಯಾ–ಉಕ್ರೇನ್ ಯುದ್ಧ, ಇತರ ಪ್ರಾದೇಶಿಕ ಬೆಳವಣಿಗೆಗಳು ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂದು ತುರ್ಕಿಯೆ ಸರ್ಕಾರಿ ಸ್ವಾಮ್ಯದ ಅನಾಡೋಲು ಸುದ್ದಿಸಂಸ್ಥೆ ವರದಿ ಮಾಡಿದೆ.

ಬುಧವಾರ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮತ್ತು ಟ್ರಂಪ್ ನಡುವೆ ದೂರವಾಣಿ ಸಂಭಾಷಣೆ ನಡೆದಿತ್ತು. ಹಾರ್ಮುಝ್ ಮತ್ತು ಯೆಮೆನ್ ಜಲಸಂಧಿಗಳಲ್ಲಿನ ಬೆಳವಣಿಗೆಗಳನ್ನು ತುರ್ಕಿಯೆ ಗಮನಿಸುತ್ತಿದೆ. ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು ಬೆಂಬಲಿಸುತ್ತಿದೆ ಎಂದು ಎರ್ಡೋಗನ್ ಅವರು ಟ್ರಂಪ್‌ ಗೆ ತಿಳಿಸಿದ್ದರು ಎಂದು ತುರ್ಕಿಯೆಯ ಅಧ್ಯಕ್ಷೀಯ ಸಂವಹನ ಕಚೇರಿ ಹೇಳಿದೆ.

ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಎರಡೂ ದೇಶಗಳನ್ನು ಒಪ್ಪಂದದತ್ತ ಕೊಂಡೊಯ್ಯಲು ತುರ್ಕಿಯೆ, ಪಾಕಿಸ್ತಾನ ಹಾಗೂ ಖತರ್ ಪ್ರಾದೇಶಿಕ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor