ಹಾರ್ಮುಝ್ ನಲ್ಲಿ ಭಾರತೀಯರಿದ್ದ ಟ್ಯಾಂಕರ್ ಗೆ ದಾಳಿ, ಎಂಜಿನ್ ಕೋಣೆಯಲ್ಲಿ ಬೆಂಕಿ
Photo Credit : X
ಟೆಹರಾನ್, ಅ. 31: ಹಾರ್ಮುಝ್ ಜಲಸಂಧಿಯಲ್ಲಿ ಪನಾಮ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ ಗೆ ಲಿಂಪೆಟ್ ಮೈನ್ಗಳ (ಆಯಸ್ಕಾಂತೀಯ ಸ್ಫೋಟಕ ಸಾಧನ) ಮೂಲಕ ದಾಳಿ ನಡೆಸಲಾಗಿದ್ದು, ಇದರ ಪರಿಣಾಮವಾಗಿ ಹಡಗಿನ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿತ್ತು. ಈ ಹಡಗಿನಲ್ಲಿ 27 ಭಾರತೀಯ ಸಿಬ್ಬಂದಿ ಇದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಎಂ.ಟಿ. ಲೂಯಿಸ್ 1’ ಎಂಬ ಹೆಸರಿನ ಈ ಟ್ಯಾಂಕರ್ನ ತಳಭಾಗಕ್ಕೆ ಒಮಾನ್ ನ ಖಾಸಬ್ನಿಂದ ಈಶಾನ್ಯಕ್ಕೆ ಸುಮಾರು 46 ಕಿ.ಮೀ. ದೂರದಲ್ಲಿ ಸಣ್ಣ ದೋಣಿಯೊಂದರಲ್ಲಿ ಬಂದ ದುಷ್ಕರ್ಮಿಗಳು ಎರಡು ಲಿಂಪೆಟ್ ಮೈನ್ ಗಳನ್ನು ಅಳವಡಿಸಿದ್ದರು ಎಂದು ವರದಿ ತಿಳಿಸಿದೆ. ಬಳಿಕ ಸಂಭವಿಸಿದ ಸ್ಫೋಟದಿಂದಾಗಿ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತಾದರೂ, ಸಿಬ್ಬಂದಿ ಅದನ್ನು ನಂದಿಸುವಲ್ಲಿ ಮತ್ತು ಹಡಗಿನ ಕಾರ್ಯಾಚರಣೆಯನ್ನು ಮತ್ತೆ ಪುನರಾರಂಭಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಮತ್ತು ಟ್ಯಾಂಕರ್ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.