ಇಸ್ರೇಲಿ ನಟಿ ಚೆಲ್ಲಿ ಗೋಲ್ಡನ್‌ಬರ್ಗ್ (Photo: 7 News)

ಟೆಲ್‌ ಅವೀವ್‌: ಇಸ್ರೇಲ್‌ ನ ನೀತಿಗಳು, ಫೆಲೆಸ್ತೀನ್ ಮೇಲಿನ ಮೇಲಿನ ಆಕ್ರಮಣ ಹಾಗೂ ಯಹೂದಿ ಭಯೋತ್ಪಾದನೆಯನ್ನು ಬಹಿರಂಗವಾಗಿ ಟೀಕಿಸಿದ ಹಿರಿಯ ಇಸ್ರೇಲಿ ನಟಿ ಚೆಲ್ಲಿ ಗೋಲ್ಡನ್‌ಬರ್ಗ್, ತಮ್ಮ ಮಾತುಗಳು ನೇರ ಪ್ರಸಾರವಾಗುತ್ತಿವೆ ಎಂಬ ಅರಿವಿಲ್ಲದೆ ಮನಬಿಚ್ಚಿ ಮಾತನಾಡಿದ್ದಾರೆ. ಬಳಿಕ ತಾವು ನೀಡಿದ ಹೇಳಿಕೆಗಳು ಲಕ್ಷಾಂತರ ವೀಕ್ಷಕರಿಗೆ ಪ್ರಸಾರವಾಗಿರುವುದು ತಿಳಿದು ಒಮ್ಮೆಲೇ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ತಮ್ಮ ಸುದೀರ್ಘ ಕಲಾ ಜೀವನ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಮಾತನಾಡಲು ಗೋಲ್ಡನ್‌ಬರ್ಗ್ ಇಸ್ರೇಲ್‌ ನ 'ಚಾನೆಲ್ 13' ಟಿವಿ ಚಾನೆಲ್ ನ ಸಂದರ್ಶನ ಕಾರ್ಯಕ್ರಮಕ್ಕೆ ತೆರಳಿದ್ದರು. ಆರಂಭದಲ್ಲಿ ವೃತ್ತಿಜೀವನದ ಕುರಿತು ನಡೆಯುತ್ತಿದ್ದ ಮಾತುಕತೆ, ಕೆಲವೇ ಹೊತ್ತಿನಲ್ಲಿ ಇಸ್ರೇಲ್‌ ನ ರಾಜಕೀಯ ಮತ್ತು ಫೆಲೆಸ್ತೀನಿಯನ್ನರ ಮೇಲಿನ ಅದರ ನೀತಿಗಳ ಕುರಿತ ಚರ್ಚೆಯಾಗಿ ಬದಲಾಯಿತು. ಈ ವೇಳೆ ನಟಿ ತಮ್ಮ ಅಸಮಾಧಾನವನ್ನು ಮುಕ್ತವಾಗಿ ವ್ಯಕ್ತಪಡಿಸಿದರು.

'ಮತ್ತೆ ನಾನು ಇಸ್ರೇಲಿ ಎಂಬುದಕ್ಕೆ ಹೆಮ್ಮೆಪಡುವಂತಾಗಬೇಕು ಎಂಬುದು ನನ್ನ ಬಯಕೆ' ಎಂದು ಗೋಲ್ಡನ್‌ಬರ್ಗ್ ಹೇಳಿದರು.

ಇದಕ್ಕೆ ಸಂದರ್ಶಕರು, 'ಇಸ್ರೇಲಿ ಆಗಿರುವುದಕ್ಕೆ ಹೆಮ್ಮೆಪಡದಷ್ಟು ಪರಿಸ್ಥಿತಿ ಹದಗೆಟ್ಟಿದೆಯೇ?' ಎಂದು ಪ್ರಶ್ನಿಸಿದರು.

'ಹೆಮ್ಮೆಪಡಬೇಕು ಎಂಬ ಆಸೆ ಇದೆ. ಆದರೆ, ಈಗ ಇಸ್ರೇಲಿ ಪ್ರಜೆ ಆಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿಲ್ಲ' ಎಂದು ನಟಿ ಉತ್ತರಿಸಿದರು.

ಇಂತಹ ಹೇಳಿಕೆಗಳನ್ನು ನೇರ ಪ್ರಸಾರದಲ್ಲಿ ನೀಡುವುದು ಅಪಾಯಕಾರಿ ಎಂದು ಸಂದರ್ಶಕರು ಎಚ್ಚರಿಸಿದರು. ಆದರೆ, 'ನಾನು ನೇರ ಪ್ರಸಾರದಲ್ಲಿ ಮಾತನಾಡುತ್ತಿಲ್ಲ. ಖಾಸಗಿಯಾಗಿ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ' ಎಂದು ಗೋಲ್ಡನ್‌ಬರ್ಗ್ ಪ್ರತಿಕ್ರಿಯಿಸಿದರು. ಕಾರ್ಯಕ್ರಮದ ಪ್ರಸಾರ ಇನ್ನೂ ಮುಂದುವರಿದಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ.

‘ನಮ್ಮ ಜನಸಮುದಾಯದ ಬಗ್ಗೆ ಹೆಮ್ಮೆಯಿಲ್ಲ’

ತಮ್ಮ ಮಾತು ಮುಂದುವರಿಸಿದ ಅವರು, 'ನಾವು ಈಗ ಏನಾಗಿದ್ದೇವೆ ಎಂಬುದರ ಬಗ್ಗೆ ನನಗೆ ಹೆಮ್ಮೆಯಿಲ್ಲ. ಇದು ನನಗೆ ತುಂಬಾ ನೋವು ತಂದಿದೆ. ಏಕೆಂದರೆ, ನಾನು ಬೆಳೆದ ಕಾಲದಲ್ಲಿ ನಮ್ಮ ಜನರು ಹೀಗಿರಲಿಲ್ಲ' ಎಂದು ಅವರು ಹೇಳಿದರು.

ಇಸ್ರೇಲ್‌ ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿವರಿಸುವಂತೆ ಸಂದರ್ಶಕರು ಕೇಳಿದಾಗ, ಧಾರ್ಮಿಕ ಬಲವಂತ, ವಸಾಹತುಗಾರರ ಚಟುವಟಿಕೆಗಳು, ಯಹೂದಿ ಭಯೋತ್ಪಾದನೆ ಮತ್ತು ಅಹಂಕಾರವನ್ನು ಅವರು ಟೀಕಿಸಿದರು.

'ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಕ್ಕು ಅಲ್ಪಸಂಖ್ಯಾತರಿಗೂ ಇದೆ' ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಸಂದರ್ಶಕರೊಬ್ಬರು, 'ಅವರು ನಮ್ಮ ನಾಗರಿಕರನ್ನು, ನಮ್ಮ ಸಹೋದರ-ಸಹೋದರಿಯರನ್ನು ಮತ್ತು ಸೈನಿಕರನ್ನು ಕೊಂದರೂ ಅವರಿಗೆ ಆ ಹಕ್ಕು ಇರುತ್ತದೆಯೇ?' ಎಂದು ಮರುಪ್ರಶ್ನಿಸಿದರು.

ತಮ್ಮ ಟೀಕೆಗಳು ದೇಶದ ಮೇಲಿನ ಪ್ರೀತಿಯ ಕೊರತೆಯಿಂದ ಬಂದಿದ್ದಲ್ಲ ಎಂದು ಸ್ಪಷ್ಟಪಡಿಸಿದ ಗೋಲ್ಡನ್‌ಬರ್ಗ್, ತಾವು ದೊಡ್ಡ ದೇಶಭಕ್ತೆ ಎಂದರು.

'ನಾನು ಈ ದೇಶವನ್ನು ಪ್ರೀತಿಸುತ್ತೇನೆ. ಆದರೆ, ನಿಮ್ಮ ಮಗು ಬೆಳೆದು ದೊಡ್ಡದಾದಾಗ, "ನಾನು ನಿನಗೆ ಹೀಗೆ ಬೆಳೆಯಲು ಕಲಿಸಲಿಲ್ಲವಲ್ಲ" ಎಂದು ಹೇಳುವ ಪರಿಸ್ಥಿತಿ ಎದುರಾದರೆ ಹೇಗಿರುತ್ತದೆಯೋ, ಈಗ ನನ್ನ ಸ್ಥಿತಿಯೂ ಹಾಗೆಯೇ ಇದೆ' ಎಂದು ತಮ್ಮ ನೋವನ್ನು ತೋಡಿಕೊಂಡರು.

ಅವರ ಮಾತುಗಳನ್ನು ಕೇಳಿ ಸಂದರ್ಶಕರು ದಿಗ್ಭ್ರಮೆಗೊಂಡರು. ಅವರಲ್ಲೊಬ್ಬರು, ಬೆಳಗಿನ ಜಾವದಲ್ಲೇ ಇಂತಹ ಮಾತುಗಳನ್ನು ಕೇಳಿಸಿಕೊಳ್ಳುವುದು ಕಷ್ಟಕರ ಎಂದು ಪ್ರತಿಕ್ರಿಯಿಸಿದರು.

‘ನಾವು ನೇರ ಪ್ರಸಾರದಲ್ಲಿದ್ದೆವಾ?’

ತಾವು ಖಾಸಗಿಯಾಗಿ ಮಾತನಾಡುತ್ತಿದ್ದೇವೆ ಎಂದು ಭಾವಿಸಿದ್ದ ಗೋಲ್ಡನ್‌ಬರ್ಗ್‌ಗೆ, ತಮ್ಮ ಮಾತುಗಳು ದೂರದರ್ಶನದಲ್ಲಿ ನೇರ ಪ್ರಸಾರವಾಗುತ್ತಿವೆ ಎಂಬುದು ಆಗ ಅರಿವಿಗೆ ಬಂದಿತು. ಇದರಿಂದ ಆಘಾತಕ್ಕೊಳಗಾದ ಅವರು, 'ನಾವು ಆ ಸಂಭಾಷಣೆ ನಡೆಸುತ್ತಿದ್ದಾಗ ನೇರ ಪ್ರಸಾರ ನಡೆಯುತ್ತಿತ್ತೇ? ಇದು ಸರಿಯಲ್ಲ' ಎಂದು ಪ್ರಶ್ನಿಸಿದರು.

ಬಳಿಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, 'ಇದು ಹೀಗೆ ಆಗಬೇಕೆಂದು ನಾನು ಬಯಸಿರಲಿಲ್ಲ. ನಿಜವಾಗಿಯೂ ಬಯಸಿರಲಿಲ್ಲ. ಈಗ ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ನನಗೆ ತೀವ್ರ ಆಘಾತವಾಗಿದೆ. ನಾವು ನೇರ ಪ್ರಸಾರದಲ್ಲಿದ್ದೇವೆ ಎಂದು ನೀವು ನನಗೆ ಹೇಳಲೇ ಇಲ್ಲ. ಜಾಹೀರಾತು ವಿರಾಮ ನಡೆಯುತ್ತಿದೆ ಎಂದು ನಾನು ಭಾವಿಸಿದ್ದೆ' ಎಂದರು.

ಸಂದರ್ಶನದ ಮುಂದಿನ ಭಾಗದಲ್ಲಿ ನೇರವಾಗಿ ವೀಕ್ಷಕರನ್ನು ಉದ್ದೇಶಿಸಿ ಮಾತನಾಡಿದ ನಟಿ, ತಮ್ಮ ಮಾತುಗಳಿಗಾಗಿ ಕ್ಷಮೆಯಾಚಿಸಿದರು. ಕ್ಯಾಮೆರಾಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ ಮತ್ತು ಕಾರ್ಯಕ್ರಮ ನೇರ ಪ್ರಸಾರವಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ವಿವರಿಸಿದರು. ಅಲ್ಲದೆ, ತಾವು ಉದ್ದೇಶಿಸಿದ್ದಕ್ಕಿಂತ ಹೆಚ್ಚು ಕಠೋರವಾಗಿ ಮಾತನಾಡಿದ್ದಾಗಿ ಒಪ್ಪಿಕೊಂಡರು.

'ನಾನು ಸ್ವಲ್ಪ ಆತುರದ ಸ್ವಭಾವದವಳು. ಮಾತನಾಡುವಾಗ ತುಂಬಾ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ನಾನು ಅತ್ಯಂತ ಉತ್ಸಾಹಭರಿತ ವ್ಯಕ್ತಿ. ನಾವು ನೇರ ಪ್ರಸಾರದಲ್ಲಿದ್ದೇವೆ ಎಂಬುದು ನನಗೆ ತಿಳಿದಿರಲಿಲ್ಲ' ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ

ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನ್ ನ ಪ್ರದೇಶಗಳ ಕುರಿತು ನಟಿ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾದವು. ಕೆಲವರು ಅವರ ಮಾತುಗಳನ್ನು 'ದೇಶದ್ರೋಹ' ಎಂದು ಖಂಡಿಸಿದರೆ, ಇನ್ನು ಕೆಲವರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.

ಹದಿಹರೆಯದವರಾಗಿದ್ದಾಗ ಮಾಡೆಲಿಂಗ್ ಮೂಲಕ ಗೋಲ್ಡನ್‌ಬರ್ಗ್ ಮೊದಲ ಬಾರಿಗೆ ಖ್ಯಾತಿ ಗಳಿಸಿದ್ದರು. 1978ರಲ್ಲಿ ಬಿಡುಗಡೆಯಾದ ಇಸ್ರೇಲಿ ಚಿತ್ರ 'ಹಾ-ಲಹಾಕಾ' (ದಿ ಟ್ರೂಪ್)ನಲ್ಲಿನ ಪಾತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor