ಬೆದರಿಕೆಗಳಿಗೆ ‘ಭೌಗೋಳಿಕ ಮಿತಿಗಳಿಲ್ಲದ’ ಮಿಲಿಟರಿ ಪ್ರತಿಕ್ರಿಯೆ: ಖಾಮಿನೈ ಆದೇಶ
ಮೊಜ್ತಬಾ ಖಾಮಿನೈ | Photo Credit : PTI
ಟೆಹರಾನ್, ಅ. 31: ಯಾವುದೇ ಶತ್ರುಗಳ ಬೆದರಿಕೆಗೆ ತಕ್ಷಣವೇ ಮತ್ತು ‘ಭೌಗೋಳಿಕ ಮಿತಿಗಳಿಲ್ಲದೆ’ ಸೂಕ್ತ ಪ್ರತ್ಯುತ್ತರ ನೀಡುವಂತೆ ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರು ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದಾರೆ ಎಂದು ಶನಿವಾರ ಅವರ ಅಧಿಕೃತ ಟೆಲಿಗ್ರಾಂ ಖಾತೆಯಲ್ಲಿ ಪ್ರಕಟಿಸಲಾದ ಹೇಳಿಕೆ ತಿಳಿಸಿದೆ.
ಯಾವುದೇ ನವೀಕೃತ ಮಿಲಿಟರಿ ಅಥವಾ ಶತ್ರುಗಳ ಭಯೋತ್ಪಾದಕ ದಾಳಿಗಳನ್ನು ಕೊನೆಗೊಳಿಸುವ ಸಮಯ ಮತ್ತು ಷರತ್ತುಗಳನ್ನು ಇರಾನ್ ನಿರ್ಧರಿಸುತ್ತದೆ ಎಂದು ಖಾಮಿನೈ ಹೇಳಿದ್ದು, ಅಮೆರಿಕ ಮತ್ತು ಇಸ್ರೇಲ್ನ ‘ಭೌತಿಕ ಮತ್ತು ಭೌತಿಕವಲ್ಲದ’ ಆಸ್ತಿಗಳನ್ನು ಇರಾನಿನ ಪಡೆಗಳ ಗುರಿಯ ವ್ಯಾಪ್ತಿಗೆ ತರಲು ಮಿಲಿಟರಿ ಗುರಿಗಳ ಪಟ್ಟಿಯನ್ನು ನವೀಕರಿಸಲು ಆದೇಶಿಸಿದ್ದಾರೆ.
ಯಹೂದಿ ಒತ್ತಡಕ್ಕೆ ಮಣಿದು ಮತ್ತು ಅವರನ್ನು ಓಲೈಸುವ ಪ್ರಯತ್ನದಲ್ಲಿ ಅಮೆರಿಕ ಅಧ್ಯಕ್ಷರು ಮತ್ತೊಮ್ಮೆ ಪ್ರಾದೇಶಿಕ ಸಾಹಸಕ್ಕೆ ಕೈಹಾಕಿದರೆ, ಯುದ್ಧದ ಜ್ವಾಲೆಯು ನಿಸ್ಸಂದೇಹವಾಗಿ ವಿಶಾಲವಾದ ಭೌಗೋಳಿಕ ಪ್ರದೇಶವನ್ನು ಆವರಿಸುತ್ತದೆ ಎಂದು ಇರಾನ್ ಸೇನೆಯ ವಕ್ತಾರ ಮೊಹಮ್ಮದ್ ಅಕ್ರಮೀನಿಯಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಜನರಿಗೆ ಹಾನಿ ಮಾಡಲು ಧೈರ್ಯ ಮಾಡುವವರ ವಿರುದ್ಧ ಇರಾನ್ ನ ಶಕ್ತಿಶಾಲಿ ಸಶಸ್ತ್ರ ಪಡೆಗಳು ಕಠಿಣ ಕ್ರಮ ಕೈಗೊಳ್ಳಲಿವೆ’ ಎಂದು ಶನಿವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಕೂಡ ಎಚ್ಚರಿಕೆ ನೀಡಿದ್ದಾರೆ.