×
Ad

ಹೆಲಿಕಾಪ್ಟರ್ ಪತನ: ಘಾನಾ ರಕ್ಷಣಾ ಸಚಿವ, ಪರಿಸರ ಸಚಿವ ಸೇರಿದಂತೆ ಎಂಟು ಮಂದಿ ಮೃತ್ಯು

Update: 2025-08-07 14:06 IST

Photo credit: NDTV

ಅಶಂತಿ ಪ್ರಾಂತ್ಯ, ಘಾನಾ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಘಾನಾ ರಕ್ಷಣಾ ಸಚಿವ ಹಾಗೂ ಪರಿಸರ ಸಚಿವ ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಘಾನಾದ ಅಶಂತಿ ಪ್ರಾಂತ್ಯದಲ್ಲಿ ನಡೆದಿದೆ.

ಮೃತರನಗನು ಘಾನಾ ರಕ್ಷಣಾ ಸಚಿವ ಎಡ್ವರ್ಡ್ ಕೋಫಿ ಒಮೇನೆ ಬೋಮಾಹ್, ಪರಿಸರ, ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಚಿವ ಮುರ್ತಾಲಾ ಮುಹಮ್ಮದ್ ಎಂದು ಗುರುತಿಸಲಾಗಿದೆ. ಇವರೊಂದಿಗೆ, ಹಂಗಾಮಿ ಉಪ ರಾಷ್ಟ್ರೀಯ ಭದ್ರತಾ ಸಮನ್ವಯಕಾರ ಮುನಿರು ಮುಹಮ್ಮದ್ ಲಿಮುನು, ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಯಾಮ್ಯುಯೆಲ್ ಸರ್ಪಾಂಗ್ ಹಾಗೂ ಮಾಜಿ ಸಂಸತ್ ಅಭ್ಯರ್ಥಿ ಸ್ಯಾಮ್ಯುಯೆಲ್ ಅಬೋಗ್ಯೆ ಕೂಡಾ ಸೇರಿದ್ದಾರೆ.

ಈ ಅಪಘಾತದಲ್ಲಿ ಹೆಲಿಕಾಪ್ಟರ್ ಸಿಬ್ಬಂದಿಗಳಾದ ಪೀಟರ್ ಬಫೆಮಿ ಅನಲ, ಮನಿನ್ ಟ್ವುಮ್-ಅಂಪಡು ಹಾಗೂ ಅರ್ನೆಸ್ಟ್ ಅಡ್ಡೊ ಮೆನ್ಸಾಹ್ ಕೂಡಾ ಮೃತಪಟ್ಟಿದ್ದಾರೆ.

ಮಾಧ್ಯಮ ವಿವರಣೆ ಗೋಷ್ಠಿಯಲ್ಲಿ ಈ ಸುದ್ದಿಯನ್ನು ದೃಢಪಡಿಸಿದ ಸಿಬ್ಬಂದಿ ವರ್ಗದ ಮುಖ್ಯಸ್ಥ ಜೂಲಿಯಸ್ ದೆಬ್ರಾಹ್, “ಅಶಂತಿ ಪ್ರಾಂತ್ಯದಲ್ಲಿನ ಅದಾನ್ಸಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂಬ ರಾಷ್ಟ್ರೀಯ ದುರಂತವನ್ನು ಪ್ರಕಟಿಸಲು ವಿಷಾದವಾಗುತ್ತಿದೆ” ಎಂದು ಹೇಳಿದ್ದಾರೆ.

ಈ ದುರಂತದ ಬೆನ್ನಿಗೇ, ಮೃತರಿಗೆ ಗೌರವ ಸಲ್ಲಿಸಲು ಮುಂದಿನ ಆದೇಶದವರೆಗೆ ಎಲ್ಲ ರಾಷ್ಟ್ರೀಯ ಧ್ವಜಗಳನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಘಾನಾ ಅಧ್ಯಕ್ಷ ನಾನಾ ಅಕುಫೊ-ಅಡ್ಡೊ ನಿರ್ದೇಶನ ನೀಡಿದ್ದಾರೆ. ಮೃತರಿಗೆ ಸಂತಾಪ ವ್ಯಕ್ತಪಡಿಸಿರುವ ಸರಕಾರ, ಮೃತರು ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದೆ.

ಘಾನಾದಲ್ಲಿನ ವಿಶ್ವ ಸಂಸ್ಥೆ ಕಚೇರಿ ಕೂಡಾ ಈ ದುರಂತಕ್ಕೆ ಕಂಬನಿ ಮಿಡಿದಿದ್ದು, “ಇದೊಂದು ರಾಷ್ಟ್ರೀಯ ದುರಂತ ಹಾಗೂ ಅಂತಾರಾಷ್ಟ್ರೀಯ ನಷ್ಟ” ಎಂದು ವಿಶ್ವ ಸಂಸ್ಥೆಯ ಸ್ಥಾನಿಕ ಸಮನ್ವಯಕಾರ ಝಿಯಾ ಚೌಧುರಿ ಸಂತಾಪ ವ್ಯಕ್ತಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News