ರಾಷ್ಟ್ರೀಯ ಭದ್ರತೆಗೆ ಗ್ರೀನ್‌ಲ್ಯಾಂಡ್ ಅಗತ್ಯ: ಟ್ರಂಪ್
ವಾಷಿಂಗ್ಟನ್: ಡೆನ್ಮಾರ್ಕ್ ಹಾಗೂ ಗ್ರೀನ್ಲ್ಯಾಂಡ್ ಸ್ವಾಯತ್ತ ಪ್ರದೇಶದ ಅಧಿಕಾರಿಗಳೊಂದಿಗೆ ವಾಷಿಂಗ್ಟನ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಕುರಿತು ಶೀಘ್ರದಲ್ಲೇ ಒಂದು ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮಾತುಕತೆಯ ಬಳಿಕ ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶತಮಾನಗಳಿಂದ ಗ್ರೀನ್ಲ್ಯಾಂಡ್ ಅನ್ನು ಆಡಳಿತ ನಡೆಸುತ್ತಿರುವ ಡೆನ್ಮಾರ್ಕ್ ಜತೆ ಅಮೆರಿಕ ಅತ್ಯುತ್ತಮ ಸಂಬಂಧ ಹೊಂದಿದೆ. ನನ್ನ ಅಭಿಪ್ರಾಯದಲ್ಲಿ ಈ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿದೆ” ಎಂದು ಹೇಳಿದರು.
ಅದೇ ವೇಳೆ ಅಮೆರಿಕದ ಭದ್ರತಾ ಹಿತಾಸಕ್ತಿಗೆ ಗ್ರೀನ್ಲ್ಯಾಂಡ್ ಅತ್ಯಗತ್ಯ ಎಂದು ಟ್ರಂಪ್ ಪುನರುಚ್ಚರಿಸಿದರು. “ನಮ್ಮ ರಾಷ್ಟ್ರೀಯ ಭದ್ರತೆಗೆ ಗ್ರೀನ್ಲ್ಯಾಂಡ್ ಅವಶ್ಯಕ. ಮುಂದೆ ಏನಾಗುತ್ತದೆ ನೋಡೋಣ” ಎಂದು ಹೇಳಿದರು.
ಆರ್ಕ್ಟಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಜಾಗತಿಕ ಸ್ಪರ್ಧೆಯ ಕುರಿತು ಒತ್ತಿ ಹೇಳಿದ ಅವರು, “ನಾವು ಅಲ್ಲಿ ಸಕ್ರಿಯರಾಗದಿದ್ದರೆ ರಷ್ಯಾ ಹಾಗೂ ಚೀನಾ ಒಳನುಗ್ಗುತ್ತವೆ. ಈ ವಿಚಾರದಲ್ಲಿ ಡೆನ್ಮಾರ್ಕ್ ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ಎಲ್ಲವನ್ನೂ ಮಾಡಲು ಸಾಮರ್ಥ್ಯ ಹೊಂದಿದ್ದೇವೆ” ಎಂದು ವಿಶ್ಲೇಷಿಸಿದರು.