ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಾಯುಪ್ರದೇಶವನ್ನು ಮುಚ್ಚಿದ ಇರಾನ್
“ಪ್ರಯಾಣ ವಿಳಂಬಕ್ಕೆ ಕಾರಣವಾಗಬಹುದು”: ಪ್ರಯಾಣಿಕರಿಗೆ ಏರ್ ಇಂಡಿಯಾ, ಇಂಡಿಗೋ ಸಲಹೆ
Photo| hindustantimes
ಟೆಹ್ರಾನ್: ಉದ್ವಿಗ್ನತೆ ಹೆಚ್ಚಳ, ಅಮೆರಿಕದ ಬೆದರಿಕೆ ಬೆನ್ನಲ್ಲೆಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಪರ್ಯಾಯ ಮಾರ್ಗವನ್ನು ಬಳಸುತ್ತಿರುವುದಾಗಿ ಏರ್ ಇಂಡಿಯಾ ತಿಳಿಸಿದ್ದು, ಪ್ರಯಾಣ ವಿಳಂಬಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ, ʼಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹೀಗಾಗಿ, ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಇರಾನ್ ಪ್ರದೇಶಗಳ ಮೇಲೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನಗಳು ಈಗ ಪರ್ಯಾಯ ಮಾರ್ಗವನ್ನು ಬಳಸುತ್ತಿವೆ. ಇದು ವಿಳಂಬಕ್ಕೆ ಕಾರಣವಾಗಬಹುದು’ಎಂದು ಹೇಳಿದೆ.
ಇದಲ್ಲದೆ ಮಾರ್ಗ ಬದಲಾಯಿಸಲು ಸಾಧ್ಯವಾಗದ ಕೆಲವು ವಿಮಾನಗಳ ಹಾರಾಟ ರದ್ದುಗೊಳಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ವಿಮಾನಗಳ ಬಗ್ಗೆ ಪರಿಶೀಲಿಸುವಂತೆಯೂ ವಿನಂತಿಸಿದೆ. ಈ ಅನಿರೀಕ್ಷಿತ ಅಡಚಣೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇರಾನ್‌ನಲ್ಲಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆ ವಿಶೇಷ ಅನುಮತಿಯೊಂದಿಗೆ ದೇಶಕ್ಕೆ ಬರುವ ಅಥವಾ ದೇಶದಿಂದ ಹಾರಾಟ ನಡೆಸುವ ವಿಮಾನಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಇರಾನ್ ಮುಚ್ಚಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದರಿಂದಾಗಿ ಇಂಡಿಗೋ ಏರ್‌ಲೈನ್ಸ್ ಕೂಡ ಇದೇ ರೀತಿಯ ಸಲಹೆಯನ್ನು ಬಿಡುಗಡೆ ಮಾಡಿದೆ. ಇರಾನ್ ಹಠಾತ್ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.