ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಹಿಂದೆ ಸರಿದರೆ ಆಟಗಾರರಿಗೇ ನಷ್ಟ: ಬಿಸಿಬಿ ಎಚ್ಚರಿಕೆ
PC: x.com/CricketNDTV
ಢಾಕಾ:ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಕುರಿತು ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಟೂರ್ನಿಯಿಂದ ಬಾಂಗ್ಲಾ ತಂಡ ಹಿಂದೆ ಸರಿದರೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಯಾವುದೇ ನಷ್ಟವಾಗುವುದಿಲ್ಲ; ನಷ್ಟವಾಗುವುದು ಆಟಗಾರರಿಗೆ ಮಾತ್ರ ಎಂದು ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹುಸೈನ್ ಎಚ್ಚರಿಕೆ ನೀಡಿದ್ದಾರೆ.
“ವಿಶ್ವಕಪ್‌ನಲ್ಲಿ ಬಾಂಗ್ಲಾ ತಂಡ ಭಾಗವಹಿಸದಿದ್ದರೆ ಬಿಸಿಬಿಗೆ ಯಾವುದೇ ನಷ್ಟವಿಲ್ಲ. ನಷ್ಟವಾಗುವುದು ಆಟಗಾರರಿಗೆ,” ಎಂದು ನಜ್ಮುಲ್ ಹುಸೈನ್ ಹೇಳಿದ್ದಾಗಿ ಕ್ರಿಕ್‌ಬುಝ್ ವರದಿ ಮಾಡಿದೆ. “2027ರವರೆಗೂ ನಮ್ಮ ಆದಾಯಕ್ಕೆ ಯಾವುದೇ ತೊಂದರೆ ಇಲ್ಲ. ಏಕೆಂದರೆ 2022ರ ಐಸಿಸಿ ಹಣಕಾಸು ಸಭೆಯಲ್ಲೇ ಇದನ್ನು ನಿರ್ಧರಿಸಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದ ವಿಶ್ವಕಪ್‌ಗಳು, ದ್ವಿಪಕ್ಷೀಯ ಸರಣಿಗಳು ಅಥವಾ ಇತರ ಅಂತರರಾಷ್ಟ್ರೀಯ ಟೂರ್ನಿಗಳ ವಿಚಾರದಲ್ಲಿ ಮಾತ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. “ಉದಾಹರಣೆಗೆ, ಎಫ್‌ಟಿಪಿ ಅಡಿಯಲ್ಲಿ ಇತರ ತಂಡಗಳು ನಮ್ಮ ದೇಶಕ್ಕೆ ಬರಲಿವೆಯೇ ಎಂಬುದು ಪ್ರಮುಖ ಪ್ರಶ್ನೆ. ಆದರೆ ವಿಶ್ವಕಪ್‌ನಿಂದ ಬಿಸಿಬಿಗೆ ಯಾವುದೇ ನಷ್ಟವಾಗುವುದಿಲ್ಲ,” ಎಂದು ವಿವರಿಸಿದರು.
ಪಂದ್ಯದ ಸಂಭಾವನೆ ಹಾಗೂ ಸಾಧನೆ ಆಧಾರಿತ ಬೋನಸ್‌ಗಳನ್ನು ನೇರವಾಗಿ ಆಟಗಾರರಿಗೇ ನೀಡಲಾಗುತ್ತದೆ. ಇದರಿಂದ ಮಂಡಳಿಗೆ ಲಾಭ ಅಥವಾ ನಷ್ಟವಾಗುವುದಿಲ್ಲ. “ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಿದರೆ ಪ್ರತಿಪಂದ್ಯಕ್ಕೂ ಶುಲ್ಕ ಪಡೆಯುತ್ತಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಅಥವಾ ವಿಶೇಷ ಸಾಧನೆ ಮಾಡಿದರೆ, ಐಸಿಸಿ ನಿಯಮಾವಳಿಯಂತೆ ಅವರಿಗೆ ಹಣ ಲಭಿಸುತ್ತದೆ,” ಎಂದು ನಜ್ಮುಲ್ ಹುಸೈನ್ ತಿಳಿಸಿದರು.
“ಹಣವನ್ನು ನೇರವಾಗಿ ಆಟಗಾರರು ಪಡೆಯುತ್ತಾರೆ. ಅದಕ್ಕೆ ಮಂಡಳಿಗೆ ಯಾವುದೇ ಸಂಬಂಧವಿಲ್ಲ. ವಿಶ್ವಕಪ್‌ನಲ್ಲಿ ಬಾಂಗ್ಲಾ ಆಟಗಾರರು ಆಡಿದರೂ, ಆಡದಿದ್ದರೂ ಬಿಸಿಬಿಗೆ ಲಾಭವೂ ಇಲ್ಲ; ನಷ್ಟವೂ ಇಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.