×
Ad

ಇಸ್ರೇಲ್ ಪಡೆಗಳು ನಮ್ಮನ್ನು ಅಪಹರಿಸಿದೆ: ಗ್ರೆಟಾ ಥನ್‌ಬರ್ಗ್‌ ಆರೋಪ

Update: 2025-06-09 12:09 IST

Screengrab:X/@GazaFFlotilla

ಟೆಲ್ಅವೀವ್ : ಗಾಝಾಗೆ ಹೊರಟಿದ್ದ ನೆರವು ಸಾಗಾಟದ ಹಡಗನ್ನು ಅಂತಾರಾಷ್ಟ್ರೀಯ ಜಲಗಡಿಯಲ್ಲಿ ತಡೆದ ಇಸ್ರೇಲ್ ಪಡೆಗಳು, ಮಾನವ ಹಕ್ಕುಗಳ ಹೋರಾಟಗಾರ್ತಿ, ಪರಿಸರವಾದಿ ಗ್ರೆಟಾ ಥನ್‌ಬರ್ಗ್‌ ಮತ್ತು ಇತರ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಇಸ್ರೇಲ್ ಪಡೆಗಳು ನಮ್ಮನ್ನು ತಡೆದು ಅಪಹರಿಸಿವೆ ಎಂದು ಈ ವೇಳೆ ಗ್ರೆಟಾ ಥನ್‌ಬರ್ಗ್‌ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ʼನೀವು ಈ ವೀಡಿಯೊವನ್ನು ನೋಡಿದರೆ, ಇಸ್ರೇಲ್‌ ಪಡೆಗಳು ಅಥವಾ ಇಸ್ರೇಲ್ ಅನ್ನು ಬೆಂಬಲಿಸುವ ಪಡೆಗಳು ನಮ್ಮನ್ನು ಅಂತಾರಾಷ್ಟ್ರೀಯ ಜಲಗಡಿಯಲ್ಲಿ ತಡೆದು ಅಪಹರಿಸುತ್ತಿವೆ ಎಂದರ್ಥʼ ಎಂದು ಥನ್‌ಬರ್ಗ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರೆಟಾ ಥನ್‌ಬರ್ಗ್‌ ಮತ್ತು ಇತರ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ನೆರವು ಹಡಗನ್ನು ಇಸ್ರೇಲ್ ಕಡೆ ತಿರುಗಿಸಲಾಗಿದೆ. ಗ್ರೇಟಾ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌, ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯೆ ರಿಮಾ ಹಸನ್, ಗೇಮ್ ಆಫ್ ಥ್ರೋನ್ಸ್" ನಟ ಲಿಯಾಮ್ ಕನ್ನಿಂಗ್ಹ್ಯಾಮ್, ಮಾನವ ಹಕ್ಕುಗಳ ಹೋರಾಟಗಾರರು, ವೈದ್ಯರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರಿದ್ದರು.

"ಫ್ರೀಡಂ ಫ್ಲೋಟಿಲ್ಲಾ ಕೊಯಲಿಷನ್" ಎಂಬ ಮಾನವೀಯ ಸಂಘಟನೆಯು "ಮ್ಯಾಡ್ಲೀನ್" ಎಂಬ ಹಡಗಿನಲ್ಲಿ ಹಸಿವಿನಿಂದ ಬಳಲುತ್ತಿರುವ ಗಾಝಾದ 21 ಲಕ್ಷ ಜನರಿಗೆ ನೆರವು ಒದಗಿಸಲು ಪ್ರಯತ್ನಿಸುತ್ತಿತ್ತು.

ಇಸ್ರೇಲ್ ವಿದೇಶಾಂಗ ಸಚಿವಾಲಯ ಸೋಮವಾರ ಮುಂಜಾನೆ ಈ ಕುರಿತ ವೀಡಿಯೊ ಬಿಡುಗಡೆ ಮಾಡಿದೆ. ಹಡಗನ್ನು ಇಸ್ರೇಲ್‌ನ ಕರಾವಳಿಗೆ ಸುರಕ್ಷಿತವಾಗಿ ಕೊಂಡೊಯ್ಯಲಾಗುತ್ತಿದೆ ಮತ್ತು ಪ್ರಯಾಣಿಕರು ತಮ್ಮ ದೇಶಗಳಿಗೆ ಮರಳಲಿದ್ದಾರೆ ಎಂದು ತಿಳಿಸಿದೆ. ಹಡಗಿನ ಸಿಬ್ಬಂದಿ ಕಿತ್ತಳೆ ಬಣ್ಣದ ಲೈಫ್ ಜಾಕೆಟ್‌ಗಳನ್ನು ಧರಿಸಿ ಕುಳಿತಿರುವುದು ಮತ್ತು ಸೈನಿಕರು ಅವರಿಗೆ ನೀರು ಮತ್ತು ಸ್ಯಾಂಡ್ವಿಚ್‌ಗಳನ್ನು ನೀಡುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ ಗ್ರೆಟಾ ಥನ್‌ಬರ್ಗ್‌ ಮುಂಭಾಗದಲ್ಲಿ ಕುಳಿತಿರುವುದು ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News