×
Ad

ಪೆನ್ಸಿಲ್ವೇನಿಯಾ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ; ಇಬ್ಬರು ಮೃತ್ಯು, ಹಲವರಿಗೆ ಗಾಯ

ಸಿಲುಕಿಕೊಂಡವರ ರಕ್ಷಣೆಗೆ ಕಾರ್ಯಾಚರಣೆ

Update: 2025-12-24 07:39 IST

Photo credit: AP

ಪೆನ್ಸಿಲ್ವೇನಿಯಾ: ಇಲ್ಲಿನ ನರ್ಸಿಂಗ್‍ ಹೋಂ ಒಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಹಲವು ಮಂದಿ ಬೆಂಕಿಯ ಕೆನ್ನಾಲಿಗೆಯಿಂದ ಆವೃತವಾಗಿರುವ ಕಟ್ಟಡದಲ್ಲಿ ಸಿಲುಕಿಕೊಂಡಿರುದ ಸಾಧ್ಯತೆ ಇದೆ. ತುರ್ತು ಪರಿಹಾರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಫಿಲಿಡೆಲ್ಫಿಯಾ ಸಮೀಪದ ಬ್ರಿಸ್ಟಾಲ್ ಟೌನ್‍ಶಿಪ್‍ನ ಸಿಲ್ವರ್ ಲೇಕ್ ನರ್ಸಿಂಗ್‍ಹೋಮ್‍ನಲ್ಲಿ ಸ್ಫೋಟ ಸಂಭವಿಸಿದೆ. ಇದು ಅನಿಲ ಸ್ಫೋಟದ ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಹಲವು ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ" ಎಂದು ಪೆನ್ಸಿಲ್ವೇನಿಯಾ ತುರ್ತು ನಿರ್ವಹಣೆ ಏಜೆನ್ಸಿಯ ವಕ್ತಾರ ರುತ್ ಮಿಲ್ಲರ್ ಹೇಳಿದ್ದಾರೆ. ತರ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ನಿವಾಸಿಗಳನ್ನು ಹೊರಕ್ಕೆ ಕರೆ ತರಲು ಮತ್ತು ನಾಪತ್ತೆಯಾದವರ ಶೋಧಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಕಾರುಗಳು, ಆ್ಯಂಬುಲೆನ್ಸ್ ಗಳು, ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಓಡಾಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಿಟಕಿಗಳು ಸಿಡಿದು ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಹೊರಹೊಮ್ಮುತ್ತಿರುವುದು ಕಾಣಿಸುತ್ತಿದೆ.

ಈ ಸ್ಫೋಟ ಆಕಸ್ಮಿಕ ಘಟನೆ ಎಂದು ಅಪ್ಪರ್ ಮೇಕ್‍ಫೀಲ್ಡ್ ಪೊಲೀಸ್ ಇಲಾಖೆ ಹೇಳಿದ್ದು, ತುರ್ತು ಸ್ಪಂದನಾ ಕಾರ್ಯ ಪ್ರಗತಿಯಲ್ಲಿರುವುದರಿಂದ ಸಾರ್ವಜನಿಕರು ಘಟನಾ ಸ್ಥಳದಿಂದ ದೂರ ಇರುವಂತೆ ಸಲಹೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News