×
Ad

ವಿಮಾನ ಅಪಘಾತದಲ್ಲಿ ಲಿಬಿಯಾ ಸೇನಾ ಮುಖ್ಯಸ್ಥ ಸೇರಿ ಎಂಟು ಮಂದಿ ಮೃತ್ಯು

Update: 2025-12-24 08:03 IST

Photo credit: indiatoday.in

ಅಂಕಾರಾ: ಲಿಬಿಯಾ ಸೇನೆಯ ಮುಖ್ಯಸ್ಥ ಮತ್ತು ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಕೇಂದ್ರ ಟರ್ಕಿಯಲ್ಲಿ ಬುಧವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಅಂಕಾರಾ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿತು ಎಂದು ಲಿಬಿಯಾ ಮತ್ತು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ.

ತುರ್ತು ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದಾಗ ವಿಮಾನ ತಾಂತ್ರಿಕ ದೋಷದಿಂದಾಗಿ ರಾಡಾರ್ ವ್ಯವಸ್ಥೆಯಿಂದ ಕಣ್ಮರೆಯಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದೇಶದ ಸೇನಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹ್ಮದ್ ಅಲಿ ಅಹ್ಮದ್ ಅಲ್-ಹದ್ದದ್ ಹಾಗೂ ಇತರ ನಾಲ್ವರು ಅಧಿಕಾರಿಗಳು ಮತ್ತು ಮೂವರು ಸಿಬ್ಬಂದಿ ಮೃತಪಟ್ಟಿರುವುದನ್ನು ಲಿಬಿಯಾದ ಅಂತರ್ ರಾಷ್ಟ್ರೀಯ ಮನ್ನಣೆ ಪಡೆದಿರುವ ಸರ್ಕಾರ ದೃಢಪಡಿಸಿದೆ. ಪ್ರಧಾನಿ ಅಬ್ದುಲ್ ಹಮೀದ್ ದಿಬೆಬ ಈ ಘಟನೆಯನ್ನು "ದುರಂತ" ಎಂದು ಬಣ್ಣಿಸಿದ್ದು, ದೇಶಕ್ಕೆ ದೊಡ್ಡ ನಷ್ಟ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಲಿಬಿಯಾ ಸೇನಾ ಮುಖ್ಯಸ್ಥರು ಇದ್ದ ಡಸಾಲ್ಡ್ ಫಾಲ್ಕನ್ 50 ಬ್ಯುಸಿನೆಸ್ ಜೆಟ್, ಅಂಕಾರಾ ಎಸೆಬ್‍ಬೋಗಾ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಜೆ ಹೊರಟಿತ್ತು. ಉನ್ನತ ಮಟ್ಟದ ರಕ್ಷಣಾ ಭೇಟಿಯ ಬಳಿಕ ಸೇನಾ ಮುಖ್ಯಸ್ಥರು ಇತರ ಹಿರಿಯ ಅಧಿಕಾರಿಗಳ ಜತೆ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದರು. ರಾತ್ರಿ 8.30ಕ್ಕೆ ವಿಮಾನ ಟೇಕಾಫ್ ಆಗಿದ್ದು, 40 ನಿಮಿಷಗಳ ಬಳಿಕ ಸಂಪರ್ಕ ಕಡಿದುಕೊಂಡಿತು ಎಂದು ಟರ್ಕಿಯ ರಕ್ಷಣಾ ಸಚಿವ ಅಲಿ ಎರ್ಲಿಕಾಯಾ ಹೇಳಿದ್ದಾರೆ. ಅಪಘಾತಕ್ಕೆ ಮುನ್ನ ಹೇಮನಾ ಬಳಿ ತುರ್ತು ಲ್ಯಾಂಡಿಂಗ್ ಸಂದೇಶವನ್ನು ರವಾನಿಸಿತ್ತು ಎಂದು ವಿವರಿಸಿದ್ದಾರೆ.

ರಾಜಧಾನಿಯಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ಹೇಮನಾ ಜಿಲ್ಲೆಯ ಕೆಸಿಕ್ಕವಕ್ ಎಂಬ ಗ್ರಾಮದ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಎಲೆಕ್ಟ್ರಿಕಲ್ ದೋಷದಿಂದಾಗಿ ತುರ್ತು ಲ್ಯಾಂಡಿಂಗ್‍ಗೆ ವಿಮಾನ ಸಿಬ್ಬಂದಿ ಮನವಿ ಮಾಡಿದ್ದರು. ಆಗ ವಿಮಾನವನ್ನು ಎಸೆನ್‍ಬೋಗಾಕ್ಕೆ ವಾಪಾಸು ತರಲು ವಿಮಾನ ಸಂಚಾರ ನಿಯಂತ್ರಕರು ಸೂಚಿಸಿದರು ಎಂದು ಅಧ್ಯಕ್ಷೀಯ ಸಂವಹನ ಕಚೇರಿಯ ಮುಖ್ಯಸ್ಥ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News