ಗ್ವಾಟೆಮಾಲಾ: ಸಾಂಪ್ರದಾಯಿಕ ಯೆಹೂದಿ ಪಂಥದ ಕೇಂದ್ರದ ಮೇಲೆ ಅಧಿಕಾರಿಗಳ ದಾಳಿ; ಕನಿಷ್ಟ 160 ಮಕ್ಕಳ ರಕ್ಷಣೆ
PC : timesofisrael.
ಮೆಕ್ಸಿಕೋ ಸಿಟಿ: ಆಗ್ನೇಯ ಗ್ವಾಟೆಮಾಲಾದಲ್ಲಿ ಸಾಂಪ್ರದಾಯಿಕ ಯೆಹೂದಿ ಪಂಥ `ಲೆವ್ ತಹೋರ್'ನ ಧಾರ್ಮಿಕ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 160 ಮಕ್ಕಳ ಸಹಿತ 200 ಮಂದಿಯನ್ನು ರಕ್ಷಿಸಿರುವುದಾಗಿ ವರದಿಯಾಗಿದೆ.
ಗ್ವಾಟೆಮಾಲಾ ನಗರದಿಂದ ಆಗ್ನೇಯದಲ್ಲಿ 78 ಕಿ.ಮೀ ದೂರದಲ್ಲಿರುವ ಒರಾಟೊರಿಯೊ ನಗರದಲ್ಲಿ ಕಾರ್ಯಾಚರಿಸುತ್ತಿರುವ ಲೆವ್ ತಹೋರ್ ಪಂಥದ ವಿವಾದಾತ್ಮಕ ಧಾರ್ಮಿಕ ಪದ್ಧತಿಗಳ ಬಗ್ಗೆ ಈ ಹಿಂದಿನಿಂದಲೂ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು ಮಾನವ ಕಳ್ಳಸಾಗಣಿಕೆ, ಅಪ್ರಾಪ್ತ ವಯಸ್ಕರ ವಿರುದ್ಧ ಬಲವಂತದ ವಿವಾಹ, ದೌರ್ಜನ್ಯ, ಅತ್ಯಾಚಾರ ಇತ್ಯಾದಿ ಅಪರಾಧ ಎಸಗಿರುವುದಕ್ಕೆ ಪುರಾವೆ ಲಭಿಸಿದೆ ಎಂದು ಗ್ವಾಟೆಮಾಲಾದ `ಮಾನವ ಕಳ್ಳಸಾಗಣೆ ವಿರುದ್ಧದ ನ್ಯಾಯಾಧಿಕಾರಿಗಳ ಕಚೇರಿ'ಯ ಅಧಿಕಾರಿ ನ್ಯಾನ್ಸಿ ಪಯಿಝ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಈ ಪಂಥದ ಒಡೆತನದಲ್ಲಿರುವ ಫಾರ್ಮ್ ಹೌಸ್‍ನಲ್ಲಿದ್ದ 40 ಮಹಿಳೆಯರನ್ನೂ ರಕ್ಷಿಸಲಾಗಿದ್ದು ಇಲ್ಲಿ ಕೆಲವು ಮೂಳೆಗಳೂ ಪತ್ತೆಯಾಗಿದ್ದು ಇವು ಮಕ್ಕಳ ಮೂಳೆಗಳೆಂದು ಶಂಕಿಸಲಾಗಿದೆ. ಬಲವಂತದ ಗರ್ಭಧಾರಣೆ, ಅಪ್ರಾಪ್ತ ವಯಸ್ಕರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರದ ಅನುಮಾನದ ಮೇಲೆ ದಾಳಿ ನಡೆಸಲಾಗಿದೆ ಎಂದವರು ಹೇಳಿದ್ದಾರೆ.
1988ರಲ್ಲಿ ಇಸ್ರೇಲ್‍ನಲ್ಲಿ ಸ್ಥಾಪನೆಗೊಂಡಿರುವ `ಲೆವ್ ತಹೋರ್' ರಹಸ್ಯ ಯೆಹೂದಿ ಪಂಗಡವಾಗಿದ್ದು ಇದರ ಆಂತರಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ತನ್ನ ಸದಸ್ಯರನ್ನು ಹೊರಗಿನ ಪ್ರಪಂಚದಿಂದ ರಕ್ಷಿಸುತ್ತಾ, ಅವರ ಆಹಾರ, ಉಡುಗೆ ತೊಡುಗೆಗಳ ಬಗ್ಗೆ ಕಟ್ಟುನಿಟ್ಟಿನ ನಿಯಂತ್ರಣ ವಹಿಸುತ್ತದೆ. ದೀರ್ಘ ಪ್ರಾರ್ಥನಾ ಅವಧಿಗಳು, ಯೋಜಿತ ಮದುವೆಗಳು (ಅರೇಂಜ್ಡ್ ಮ್ಯಾರೇಜ್) ಸೇರಿದಂತೆ ಯೆಹೂದ್ಯ ಧರ್ಮದ ಕಠಿಣ ಪದ್ಧತಿಗಳನ್ನು ಆಚರಿಸುತ್ತದೆ. ಜತೆಗೆ, ಅಪಹರಣ, ಬಾಲ್ಯ ವಿವಾಹ, ದೈಹಿಕ ದೌರ್ಜನ್ಯ ಮುಂತಾದ ಆರೋಪಗಳನ್ನು ಈ ಪಂಥ ಎದುರಿಸುತ್ತಿದೆ. ಗ್ವಾಟೆಮಾಲಾ, ಅಮೆರಿಕ, ಕೆನಡಾ, ಇಸ್ರೇಲ್ ಮತ್ತು ಇತರ ದೇಶಗಳ ಸುಮಾರು 50 ಕುಟುಂಬಗಳು ಈ ಸಮುದಾಯದ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳು ಹಾಗೂ ಮಹಿಳೆಯರನ್ನು ಸರಕಾರದ ರಕ್ಷಣೆಯಲ್ಲಿ ಇರಿಸಲಾಗಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ನ್ಯಾನ್ಸಿ ಪಯಿಝ್ ಹೇಳಿದ್ದಾರೆ.