ಅಮೆರಿಕ | ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಪ್ರಶ್ನಿಸಿ ಮೊಕದ್ದಮೆ ದಾಖಲು
ಸಾಂದರ್ಭಿಕ ಚಿತ್ರ | PC : thewire.in
ವಾಷಿಂಗ್ಟನ್, ಅ.4: ಎಚ್-1ಬಿ ವೀಸಾ ಶುಲ್ಕ ಹೆಚ್ಚಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವನ್ನು ಪ್ರಶ್ನಿಸಿ ಆರೋಗ್ಯ ರಕ್ಷಣೆ ಒದಗಿಸುವವರು, ಧಾರ್ಮಿಕ ಗುಂಪುಗಳು, ವಿವಿ ಪ್ರೊಫೆಸರ್‌ಗಳು ಹಾಗೂ ಇತರರ ಒಕ್ಕೂಟವು ಶುಕ್ರವಾರ ಫೆಡರಲ್ ಮೊಕದ್ದಮೆ ದಾಖಲಿಸಿದೆ ಎಂದು ವರದಿಯಾಗಿದೆ.
ಎಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿ ಎರಡು ವಾರಗಳ ಹಿಂದೆ ಟ್ರಂಪ್ ಆದೇಶ ಜಾರಿಗೊಳಿಸಿದ್ದು ಇದು ಅಮೆರಿಕಾಕ್ಕೆ ವಲಸೆಯನ್ನು ನಿಯಂತ್ರಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಇದನ್ನು ಪ್ರಶ್ನಿಸಿ ಸ್ಯಾನ್ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಾಗಿದೆ.
ವೀಸಾ ಕಾರ್ಯಕ್ರಮವನ್ನು ನಿಯಂತ್ರಿಸುವ ಸಮಗ್ರ ಶಾಸನಬದ್ದ ಯೋಜನೆಯನ್ನು ಬದಲಾಯಿಸಲು ಮತ್ತು ಅಮೆರಿಕದ ಸಂವಿಧಾನದಡಿಯಲ್ಲಿ ಅಮೆರಿಕಾಕ್ಕೆ ಆದಾಯವನ್ನು ಗಳಿಸಲು ಏಕಪಕ್ಷೀಯವಾಗಿ ಶುಲ್ಕ, ಸುಂಕ ಹಾಗೂ ಇತರ ಕಾರ್ಯವಿಧಾನಗಳನ್ನು ವಿಧಿಸಲು ಟ್ರಂಪ್‌ಗೆ ಅಧಿಕಾರವಿಲ್ಲ. ಈ ಅಧಿಕಾರ ಅಮೆರಿಕಾದ ಸಂಸತ್ತಿಗೆ ಮಾತ್ರ ಇರುತ್ತದೆ. ಅಲ್ಲದೆ ವೀಸಾದ ಮೇಲೆ ವಿಧಿಸಿರುವ ಹೊಸ ಶುಲ್ಕ ಉದ್ಯೋಗದಾತರು, ಕಾರ್ಮಿಕರು ಮತ್ತು ಫೆಡರಲ್ ಏಜೆನ್ಸಿಗಳನ್ನು ಅವ್ಯವಸ್ಥೆಗೆ ದೂಡಿದೆ ಎಂದು ಫಿರ್ಯಾದಿಗಳು ವಾದಿಸಿದ್ದಾರೆ.