ರಫಾದಲ್ಲಿ ಉಳಿದಿರುವ ಹೋರಾಟಗಾರರು ಶರಣಾಗುವುದಿಲ್ಲ; ಶರಣಾಗತಿ ಎಂಬ ಪದ ನಮ್ಮ ನಿಘಂಟಿನಲ್ಲೇ ಇಲ್ಲ: ಹಮಾಸ್
Photo Credit : aljazeera.com
ಗಾಝಾ, ನ.9: ಗಾಝಾದಲ್ಲಿ ಇಸ್ರೇಲ್ ನಿಯಂತ್ರಣದಲ್ಲಿರುವ ರಫಾ ಪ್ರದೇಶದಲ್ಲಿ ಉಳಿದುಕೊಂಡಿರುವ ಹಮಾಸ್ ಹೋರಾಟಗಾರರು ಇಸ್ರೇಲ್ ಗೆ ಶರಣಾಗುವುದಿಲ್ಲ ಎಂದು ಹಮಾಸ್ ನ ಸಶಸ್ತ್ರ ವಿಭಾಗ `ಅಲ್-ಕಸ್ಸಾಮ್ ಬ್ರಿಗೇಡ್' ರವಿವಾರ ಹೇಳಿದೆ. ಕದನ ವಿರಾಮಕ್ಕೆ ಬೆದರಿಕೆಯೊಡ್ಡಿರುವ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಮಧ್ಯವರ್ತಿಗಳನ್ನು ಒತ್ತಾಯಿಸಿದೆ.
ರಫಾದಲ್ಲಿ ಇನ್ನೂ ಉಳಿದಿರುವ ಹೋರಾಟಗಾರರು ತಮ್ಮ ಶಸ್ತ್ರಾಸ್ತ್ರವನ್ನು ಈಜಿಪ್ಟ್ ಗೆ ಒಪ್ಪಿಸಿ, ಅಲ್ಲಿ ಇರುವ ಸುರಂಗಗಳ ವಿವರವನ್ನು ನೀಡಿದರೆ(ಅದನ್ನು ನಾಶಗೊಳಿಸಲು) ಹೋರಾಟಗಾರರಿಗೆ ಸುರಕ್ಷಿತವಾಗಿ ತೆರಳುವ ಮಾರ್ಗದ ವ್ಯವಸ್ಥೆ ಮಾಡುವ ಪ್ರಸ್ತಾಪವನ್ನು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‍ನ ನಿಯೋಗವು ಮುಂದಿರಿಸಿದೆ ಎಂದು ರಾಯ್ಟರ್ಸ್ ಗುರುವಾರ ವರದಿ ಮಾಡಿದೆ. ರಫಾದಲ್ಲಿ ಉಳಿದಿರುವ ಸುಮಾರು 200 ಹಮಾಸ್ ಹೋರಾಟಗಾರರ ಕುರಿತ ಪ್ರಸ್ತಾವಿತ ಒಪ್ಪಂದವು ಗಾಝಾದ್ಯಂತ ಹಮಾಸ್ ಪಡೆಗಳ ನಿಶ್ಯಸ್ತ್ರಗೊಳಿಸುವ ವಿಶಾಲ ಪ್ರಕ್ರಿಯೆಯ ಪರೀಕ್ಷೆಯಾಗಿದೆ ಎಂದು ಅಮೆರಿಕಾದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದರು.
` ಶರಣಾಗತಿ ಮತ್ತು ತನ್ನನ್ನು ಒಪ್ಪಿಸುವ ಪರಿಕಲ್ಪನೆಯು ಅಲ್-ಕಸ್ಸಾಮ್ ಬ್ರಿಗೇಡ್ ನ ನಿಘಂಟಿನಲ್ಲಿ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಶತ್ರುಗಳು ತಿಳಿದುಕೊಳ್ಳಬೇಕು. ಹೋರಾಟಗಾರರು ಸಕ್ರಿಯವಾಗಿರುವುದಕ್ಕೆ ಇಸ್ರೇಲ್ ಹೊಣೆಯಾಗಿದೆ ಮತ್ತು ಹೋರಾಟಗಾರರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ' ಎಂದು ಹಮಾಸ್ ಗುಂಪು ಹೇಳಿದೆ. ಕದನ ವಿರಾಮದ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಶತ್ರುಗಳು ಅದನ್ನು ಉಲ್ಲಂಘಿಸಿ ಗಾಝಾದ ಅಮಾಯಕ ನಾಗರಿಕರನ್ನು ಗುರಿಯಾಗಿಸಲು ಕ್ಷುಲ್ಲಕ ನೆಪಗಳನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳುವುದು ಮಧ್ಯಸ್ಥಿಕೆದಾರರ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ಉಲ್ಲೇಖಿಸುತ್ತಿದ್ದೇವೆ ಎಂದು ಅಲ್-ಕಸಮ್ ಬ್ರಿಗೇಡ್ ಹೇಳಿಕೆ ನೀಡಿದೆ.
ಗಾಝಾದಲ್ಲಿ ಅಕ್ಟೋಬರ್ 10ರಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಗೊಂಡಂದಿನಿಂದ ರಫಾ ಪ್ರದೇಶದಲ್ಲಿ ಇಸ್ರೇಲ್ ಪಡೆಗಳ ಮೇಲೆ ಕನಿಷ್ಠ ಎರಡು ಬಾರಿ ದಾಳಿ ನಡೆದಿದ್ದು ಇಸ್ರೇಲ್‍ನ ಮೂವರು ಯೋಧರು ಸಾವನ್ನಪ್ಪಿದ್ದಾರೆ. ಇದಕ್ಕೆ ಹಮಾಸ್ ಹೊಣೆಯೆಂದು ಇಸ್ರೇಲ್ ದೂಷಿಸಿದ್ದು ಇದನ್ನು ಹಮಾಸ್ ನಿರಾಕರಿಸಿದೆ. ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವಾರು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.
ಈ ಮಧ್ಯೆ, ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ಪೂರ್ವದಲ್ಲಿರುವ ಬನಿ ಸುಹಾಲಿಯಾದಲ್ಲಿ ರವಿವಾರ ಇಸ್ರೇಲ್‍ನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.