×
Ad

ಇಸ್ರೇಲ್ ದಾಳಿಯಲ್ಲಿ ಸಶಸ್ತ್ರ ವಿಭಾಗದ ವಕ್ತಾರ ಅಬು ಒಬೈದಾ ಮೃತ್ಯು: ದೃಢಪಡಿಸಿದ ಹಮಾಸ್

Update: 2025-12-29 22:09 IST

Photo Credit : aljazeera.com

ಗಾಝಾ: ಈ ವರ್ಷದ ಆರಂಭದಲ್ಲಿ ಇಸ್ರೇಲ್ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಗಾಝಾ ಪಟ್ಟಿಯ ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್‌ ಮತ್ತು ಹಮಾಸ್‌ ನ ಸಶಸ್ತ್ರ ವಿಭಾಗದ ವಕ್ತಾರ ಅಬು ಒಬೈದಾ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್‌ ನ ಸಂಘಟನೆ ಹಮಾಸ್ ಅಧಿಕೃತವಾಗಿ ದೃಢಪಡಿಸಿದೆ.

ಹಮಾಸ್‌ ನ ಸಶಸ್ತ್ರ ವಿಭಾಗವಾದ ಕಸ್ಸಾಮ್ ಬ್ರಿಗೇಡ್‌ಗಳು ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ರಫಾ ಬ್ರಿಗೇಡ್‌ನ ಮುಖ್ಯಸ್ಥ ಮೊಹಮ್ಮದ್ ಶಬಾನಾ ಸೇರಿದಂತೆ ಹಕಮ್ ಅಲ್–ಇಸ್ಸಿ ಮತ್ತು ರಯೀದ್ ಸಾದ್ ಎಂಬ ಇನ್ನಿಬ್ಬರು ನಾಯಕರೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಮೊಹಮ್ಮದ್ ಸಿನ್ವಾರ್ ಅವರು ಹಮಾಸ್‌ ನ ಮಾಜಿ ನಾಯಕ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರರಾಗಿದ್ದಾರೆ. ಅವರನ್ನು ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿತ್ತು. ನಂತರ ಮೂರು ತಿಂಗಳ ಬಳಿಕ ಅಬು ಒಬೈದಾ ಅವರನ್ನೂ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿತ್ತು.

ಅಬು ಒಬೈದಾ ಅವರ ನಿಜ ಹೆಸರು ಹುತೈಫಾ ಅಲ್–ಕಹ್ಲೌಟ್ ಎಂದು ಹಮಾಸ್ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ ಆರಂಭದಲ್ಲಿ ಗಾಝಾ ನಗರದ ಮೇಲೆ ಇಸ್ರೇಲ್ ಹೊಸ ಸೇನಾ ದಾಳಿಯ ಆರಂಭಿಕ ಹಂತಗಳನ್ನು ಕೈಗೊಂಡಾಗ ಅವರು ಕೊನೆಯ ಸಾರ್ವಜನಿಕ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನೂರಾರು ವಸತಿ ಕಟ್ಟಡಗಳು ನಾಶವಾಗಿದ್ದು, ಫೆಲೆಸ್ತೀನಿಯನ್ನರು ಸಾಮೂಹಿಕವಾಗಿ ಸ್ಥಳಾಂತರಗೊಳ್ಳಬೇಕಾಯಿತು.

ಗಾಝಾದಲ್ಲಿ ಹಮಾಸ್‌ ನ ಪ್ರಮುಖ ಧ್ವನಿಯಾಗಿದ್ದ ಅಬು ಒಬೈದಾ, ಈ ವರ್ಷದ ಆರಂಭದಲ್ಲಿ ಜಾರಿಯಾದ ಅಲ್ಪಾವಧಿಯ ಕದನ ವಿರಾಮದ ಅವಧಿಯಲ್ಲಿ ಯುದ್ಧಭೂಮಿಯ ಸ್ಥಿತಿ, ಕದನ ವಿರಾಮ ಉಲ್ಲಂಘನೆಗಳು ಹಾಗೂ ಇಸ್ರೇಲ್–ಫೆಲೆಸ್ತೀನ್‌ನ ಕೈದಿ ವಿನಿಮಯ ಒಪ್ಪಂದಗಳ ಕುರಿತು ನಿರಂತರ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದರು. ಆ ಒಪ್ಪಂದವನ್ನು ಇಸ್ರೇಲ್ ಏಕಪಕ್ಷೀಯವಾಗಿ ಮುರಿದಿದೆ ಎಂದು ಹಮಾಸ್ ಆರೋಪಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ದಾಳಿಗಳಲ್ಲಿ ಮೃತಪಟ್ಟಿರುವುದಾಗಿ ಹಮಾಸ್ ದೃಢಪಡಿಸಿರುವ ಪ್ರಮುಖ ಮುಖಂಡರ ಪಟ್ಟಿಯಲ್ಲಿ ಯಾಹ್ಯಾ ಸಿನ್ವಾರ್, 1990ರ ದಶಕದಲ್ಲಿ ಕಸ್ಸಾಮ್ ಬ್ರಿಗೇಡ್‌ ಗಳ ಸ್ಥಾಪಕರಲ್ಲಿ ಒಬ್ಬರಾದ ಮಿಲಿಟರಿ ಕಮಾಂಡರ್ ಮೊಹಮ್ಮದ್ ಡೀಫ್ ಹಾಗೂ ಇರಾನ್‌ನ ಟೆಹ್ರಾನ್‌ ನಲ್ಲಿ ಹತ್ಯೆಗೀಡಾದ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News