ರಶ್ಯ-ಉಕ್ರೇನ್ ಯುದ್ದ ಶೀಘ್ರವೇ ಕೊನೆಗೊಳ್ಳುವ ವಿಶ್ವಾಸವಿದೆ: ಡೊನಾಲ್ಡ್ ಟ್ರಂಪ್
ವೊಲೊದಿಮಿರ್ ಝೆಲೆನ್‍ಸ್ಕಿ , ಡೊನಾಲ್ಡ್ ಟ್ರಂಪ್ | Photo Credit : AP \ PTI
ಫ್ಲೋರಿಡಾ, ಡಿ.29: ರಶ್ಯ - ಉಕ್ರೇನ್ ಯುದ್ದ ಶೀಘ್ರವೇ ಕೊನೆಗೊಳ್ಳುವ ಬಗ್ಗೆ ವಿಶ್ವಾಸವಿದೆ. ಆದರೆ ಶಾಂತಿ ಒಪ್ಪಂದಕ್ಕೆ ಯಾವುದೇ ಔಪಚಾರಿಕ ಗಡುವು ವಿಧಿಸಿಲ್ಲ. ಶಾಂತಿ ಮಾತುಕತೆಗೆ ನಾವು ಹಿಂದೆಂದಿಗಿಂತಲೂ ತುಂಬಾ ಹತ್ತಿರದಲ್ಲಿದ್ದೇವೆ. ಆದರೆ ಕೆಲವು ಸಂಕೀರ್ಣ ವಿಷಯಗಳು ಕಗ್ಗಂಟಾಗಿಯೇ ಉಳಿದಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿಯೊಂದಿಗೆ ಫ್ಲೋರಿಡಾದಲ್ಲಿರುವ ತನ್ನ ರೆಸಾರ್ಟ್‍ನಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಟ್ರಂಪ್, ಶಾಂತಿ ಯೋಜನೆಯ ಕುರಿತ ಮಾತುಕತೆ ಪ್ರಗತಿಯ ಹಂತಕ್ಕೆ ತಲುಪಿದೆ. ಆದರೆ ಒಪ್ಪಂದ ಸಾಧಿಸುವಲ್ಲಿನ ವೈಫಲ್ಯ ಸಂಘರ್ಷವನ್ನು ವಿಸ್ತರಿಸುತ್ತದೆ ಮತ್ತು ಎರಡೂ ಕಡೆ ಇನ್ನಷ್ಟು ಸಾವು-ನೋವುಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
`ಸಭೆಗೂ ಮುನ್ನ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ನಡೆಸಿದ ಒಂದೂವರೆ ಗಂಟೆಯ ದೂರವಾಣಿ ಸಂಭಾಷಣೆ ಅತ್ಯುತ್ತಮವಾಗಿತ್ತು. ಪುಟಿನ್ ಈಗಲೂ ಶಾಂತಿಯನ್ನು ಬಯಸುತ್ತಿದ್ದಾರೆ ಎಂದು ನಂಬುತ್ತೇನೆ. ಉಕ್ರೇನ್ ಯಶಸ್ವಿಯಾಗುವುದನ್ನು ರಶ್ಯ ಬಯಸುತ್ತದೆ' ಎಂದರು. ಯುದ್ದ ಕೊನೆಗೊಳಿಸುವ ಬಗ್ಗೆ ಯಾವುದಾದರೂ ಗಡುವನ್ನು ನಿಗದಿಪಡಿಸಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು `ಯಾವುದೇ ನಿಗದಿತ ವೇಳಾಪಟ್ಟಿಯ ಆಧಾರದಲ್ಲಿ ತಾನು ಕಾರ್ಯ ನಿರ್ವಹಿಸುವುದಿಲ್ಲ. ಝೆಲೆನ್‍ಸ್ಕಿ ಮತ್ತು ತಾನು ಯುದ್ದವನ್ನು ಕೊನೆಗೊಳಿಸುವ ಒಪ್ಪಂದದ ಬಗ್ಗೆ ಬಹುತೇಕ ಒಮ್ಮತಕ್ಕೆ ಬಂದಿದ್ದೇವೆ. ಆದರೆ ಡೊನ್ಬಾಸ್ ಪ್ರಾಂತದ ಭವಿಷ್ಯದ ವಿಷಯವು ಇನ್ನೂ ಬಗೆಹರಿದಿಲ್ಲ' ಎಂದರು.
ಎರಡು ಅತ್ಯಂತ ವಿವಾದಾತ್ಮಕ ವಿಷಯಗಳಾದ ಉಕ್ರೇನ್‍ಗೆ ಭದ್ರತೆಯ ಖಾತರಿ ಮತ್ತು ಪೂರ್ವ ಉಕ್ರೇನ್‍ನ ಡೊನ್ಬಾಸ್ ಪ್ರಾಂತದ ವಿಭಜನೆಯ ಬಗ್ಗೆ ಶಾಂತಿ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ಈ ವಿಷಯದಲ್ಲಿ ಟ್ರಂಪ್ ಮತ್ತು ಝೆಲೆನ್‍ಸ್ಕಿ ತಮ್ಮ ಅಭಿಪ್ರಾಯಗಳನ್ನು ಮುಂದಿರಿಸಿದ್ದು ಯುದ್ದ ಕೊನೆಗೊಳಿಸುವ ಮಾತುಕತೆ ಯಶಸ್ವಿಯಾಗುತ್ತದೆಯೇ ಎಂಬುದು ಮುಂದಿನ ಕೆಲ ವಾರಗಳಲ್ಲಿ ಸ್ಪಷ್ಟವಾಗಲಿದೆ ಎಂದು ಅಮೆರಿಕಾ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.