ಉಸ್ಮಾನ್ ಹಾದಿ ಹಂತಕರ ಪೈಕಿ ಇಬ್ಬರು ಮೇಘಾಲಯ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ: ಢಾಕಾ ಪೊಲೀಸರು
Photo|indiatoday/Social Media
ಢಾಕಾ: ಬಾಂಗ್ಲಾದೇಶದ ರಾಜಕೀಯ ಹೋರಾಟಗಾರ ಉಸ್ಮಾನ್ ಹಾದಿ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಹಂತಕರ ಪೈಕಿ ಇಬ್ಬರು ಹಂತಕರು ಹತ್ಯೆಯ ನಂತರ ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಮಹಾನಗರ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಡಿಎಂಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎನ್.ನಝ್ರುಲ್ ಮಸೂದ್, ಶಂಕಿತ ಹಂತಕರಾದ ಫೈಸಲ್ ಕರೀಮ್ ಮಸೂದ್ ಹಾಗೂ ಅಲಾಮ್ಗಿರ್ ಶೇಖ್ ತಮ್ಮ ಸ್ಥಳೀಯ ಸಹಚರರ ಮೂಲಕ ಮೈಮೆನ್ ಸಿಂಗ್ ನಲ್ಲಿರುವ ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
“ನಮಗಿರುವ ಮಾಹಿತಿ ಪ್ರಕಾರ, ಶಂಕಿತ ಹಂತಕರು ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾರೆ. ಅವರು ಗಡಿ ದಾಟಿದ ಬಳಿಕ ಪೂರ್ತಿ ಎಂಬ ವ್ಯಕ್ತಿ ಅವರನ್ನು ಬರಮಾಡಿಕೊಂಡಿದ್ದಾನೆ. ಇದಾದ ನಂತರ, ಸಾಮಿ ಎಂಬ ಟ್ಯಾಕ್ಸಿ ಚಾಲಕನು ಅವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ದಿದ್ದಾನೆ” ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು The Daily Star ವರದಿ ಮಾಡಿದೆ.
ಶಂಕಿತ ಆರೋಪಿಗಳಿಗೆ ನೆರವು ನೀಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಅನಧಿಕೃತ ಮಾಹಿತಿ ನಮಗೆ ದೊರೆತಿದೆ ಎಂದೂ ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಮುಖ ರಾಜಕೀಯ ಹೋರಾಟಗಾರರಾಗಿದ್ದ ಉಸ್ಮಾನ್ ಹಾದಿ ಭಾರತ ಮತ್ತು ಅವಾಮಿ ಲೀಗ್ ನ ಕಟು ಟೀಕಾಕಾರರಾಗಿದ್ದರು. ಕಳೆದ ಜುಲೈ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಳ್ಳಲು ಕಾರಣವಾಗಿದ್ದ ವಿದ್ಯಾರ್ಥಿಗಳ ಹಿಂಸಾತ್ಮಕ ಹೋರಾಟದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ನಾಯಕರಲ್ಲಿ ಅವರು ಕೂಡ ಒಬ್ಬರಾಗಿದ್ದರು.