ಅಮೆರಿಕದಲ್ಲಿ ಭೀಕರ ಅಪಘಾತ: ತೆಲಂಗಾಣ ಮೂಲದ ಇಬ್ಬರು ಯುವತಿಯರು ಮೃತ್ಯು
Photo Credit : indiatoday.in
ಕ್ಯಾಲಿಫೋರ್ನಿಯಾ: ಉದ್ಯೋಗವನ್ನರಸಿ ಅಮೆರಿಕಕ್ಕೆ ತೆರಳಿದ್ದ ತೆಲಂಗಾಣದ ಮೂಲದ ಇಬ್ಬರು ಯುವತಿಯರು ಕ್ಯಾಲಿಫೋರ್ನಿಯಾದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತ ಯುವತಿಯರನ್ನು ಪುಲ್ಲುಖಂದಮ್ ಮೇಘನಾ ರಾಣಿ(24) ಹಾಗೂ ಕದಿಯಾಲ ಭಾವನಾ(24) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಯುವತಿಯರು ಮೂಲತಃ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಗಾರ್ಲಾ ಮಂಡಲ್ ನಿವಾಸಿಗಳಾಗಿದ್ದಾರೆ.
ಭಾವನಾ ಹಾಗೂ ಮೇಘನಾ ಇಬ್ಬರೂ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು. ಇತ್ತೀಚೆಗೆ ಉದ್ಯೋಗವನ್ನರಸಿ ಅಮೆರಿಕಕ್ಕೆ ತೆರಳಿದ್ದರು.
ಮೇಘನಾರ ತಂದೆ ನಾಗೇಶ್ವರ್ ರಾವ್ ಗಾರ್ಲಾದಲ್ಲಿ ಮೇ-ಸೇವಾ ಕೇಂದ್ರವನ್ನು ನಡೆಸುತ್ತಿದ್ದರೆ, ಭಾವನಾ ಅವರ ತಂದೆ ಮುಲ್ಕನೂರ್ ಗ್ರಾಮದ ಉಪ ಸರಪಂಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪುತ್ರಿಯರ ನಿಧನದ ಸುದ್ದಿ ಕೇಳಿ ಎರಡೂ ಕುಟುಂಬಗಳು ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ಆಘಾತಕ್ಕೀಡಾಗಿದ್ದಾರೆ.
ಅಪಘಾತದ ಕುರಿತು ಅಮೆರಿಕದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಯುವತಿಯರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿದೆ ಎಂದು ತಿಳಿದು ಬಂದಿದೆ.