×
Ad

Operation Sindoor ವೇಳೆ ‘ಬಂಕರ್‌ ನಲ್ಲಿ ಅಡಗಿಕೊಳ್ಳುವಂತೆʼ ಸಲಹೆ ನೀಡಲಾಗಿತ್ತು: ಬಹಿರಂಗಪಡಿಸಿದ ಪಾಕ್‌ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ

Update: 2025-12-28 23:16 IST

Photo: X/@PresOfPakistan

ಲಾಹೋರ್: ಈ ವರ್ಷದ ಮೇ ತಿಂಗಳಲ್ಲಿ ಭಾರತವು ‘ಆಪರೇಷನ್ ಸಿಂಧೂರ್’ ಆರಂಭಿಸಿದ ವೇಳೆ ತಮಗೆ “ಬಂಕರ್‌ ನಲ್ಲಿ ಅಡಗಿಕೊಳ್ಳಿ” ಎಂಬ ಸಲಹೆ ನೀಡಲಾಗಿತ್ತು ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ಬಹಿರಂಗಪಡಿಸಿದರು.

ಡಿ.27, 2007ರಂದು ರಾವಲ್ಪಿಂಡಿಯಲ್ಲಿ ನಡೆದ ಗುಂಡು ಮತ್ತು ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ ತಮ್ಮ ಪತ್ನಿ ಹಾಗೂ ಮಾಜಿ ಪ್ರಧಾನಿ ಬೆನ್ ಝೀರ್ ಭುಟ್ಟೋ ಅವರ 18ನೇ ಸಂಸ್ಮರಣೆಯ ಅಂಗವಾಗಿ ಸಿಂಧ್ ಪ್ರಾಂತ್ಯದ ಲರ್ಕಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಈ ವಿವರಗಳನ್ನು ನೀಡಿದರು.

“ನನ್ನ ಮಿಲಿಟರಿ ಕಾರ್ಯದರ್ಶಿ ಬಂದು ‘ಸರ್, ಯುದ್ಧ ಆರಂಭವಾಗಿದೆ’ ಎಂದರು. ಬಂಕರ್‌ ಗೆ ತೆರಳುವಂತೆ ಸಲಹೆ ನೀಡಿದರು. ಆದರೆ, ನಾಯಕರು ಬಂಕರ್‌ ಗಳಲ್ಲಿ ಸಾಯುವುದಿಲ್ಲ. ಯುದ್ಧಭೂಮಿಯಲ್ಲೇ ಸಾಯುತ್ತಾರೆ ಎಂದು ನಾನು ಸ್ಪಷ್ಟಪಡಿಸಿದೆ,” ಎಂದು ಝರ್ದಾರಿ ಹೇಳಿದರು.

ಪಹಲ್ಗಾಮ್‌ ನಲ್ಲಿ 26 ನಾಗರಿಕರು ಸಾವಿಗೀಡಾದ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7ರಂದು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ನಾಲ್ಕು ದಿನಗಳ ಕಾಲ ತೀವ್ರ ಸಶಸ್ತ್ರ ಸಂಘರ್ಷ ನಡೆದಿತ್ತು. ಮೇ 10ರಂದು ಕದನ ವಿರಾಮ ಒಪ್ಪಂದದೊಂದಿಗೆ ಪರಿಸ್ಥಿತಿ ಶಮನಗೊಂಡಿತ್ತು.

ಮೇ ತಿಂಗಳ ಸಂಘರ್ಷದ ಸಂದರ್ಭದಲ್ಲಿ “ಭಾರತಕ್ಕೆ ಸೂಕ್ತ ಉತ್ತರ ನೀಡಲಾಗಿದೆ” ಎಂದ ಝರ್ದಾರಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಶ್ಲಾಘಿಸಿದರು. ಜನರಲ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿಸುವ ನಿರ್ಧಾರದಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಪಾತ್ರವಿದೆ ಎಂದೂ ಅವರು ಹೇಳಿದರು.

ಈ ಸಂದರ್ಭದಲ್ಲಿ ಝರ್ದಾರಿಯವರ ಪುತ್ರ ಹಾಗೂ ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News