ಮೆಕ್ಸಿಕೋದಲ್ಲಿ ಹಳಿತಪ್ಪಿದ ರೈಲು; 13 ಮಂದಿ ಮೃತ್ಯು, 90ಕ್ಕೂ ಹೆಚ್ಚು ಮಂದಿಗೆ ಗಾಯ
Update: 2025-12-29 08:36 IST
PC: x.com/nypost
ಮೆಕ್ಸಿಕೋ: ದಕ್ಷಿಣ ಮೆಕ್ಸಿಕೋದಲ್ಲಿ ರವಿವಾರ ರೈಲು ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಫೆಸಿಫಿಕ್ ಸಾಗರ ಮತ್ತು ಗಲ್ಫ್ ಮೆಕ್ಸಿಕೊ ಪ್ರದೇಶಗಳನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸುಮಾರು 241 ಮಂದಿ ಪ್ರಯಾಣಿಕರು ಮತ್ತು ಒಂಬತ್ತು ಮಂದಿ ಸಿಬ್ಬಂದಿ ಇದ್ದ ರೈಲು, ಓಕ್ಸಕಾ ಮತ್ತು ವೆರಾಕ್ರೂಝ್ ಗಡಿಯ ನಿಝಾಂದಾ ಪಟ್ಟಣದ ತಿರುವಿನ ಬಳಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ಎಎಫ್‌ಪಿ ವರದಿ ಮಾಡಿದೆ.
ಗಾಯಾಳುಗಳಿಗೆ ನೆರವಾಗಲು ಹಲವು ಇಲಾಖೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಓಕ್ಸಕಾ ರಾಜ್ಯ ಸರ್ಕಾರದ ಪ್ರತಿನಿಧಿ ಸಲೋಮನ್ ಜಾರಾ ಹೇಳಿದ್ದಾರೆ.
ಈ ಸಾಗರೋತ್ತರ ರೈಲನ್ನು 2023ರಲ್ಲಿ ಅಂದಿನ ಅಧ್ಯಕ್ಷ ಆ್ಯಂಡ್ರೋಸ್ ಮ್ಯಾನ್ಯುಯಲ್ ಲೊಪೇಝ್ ಒಬ್ರಡಾರ್ ಉದ್ಘಾಟಿಸಿದ್ದರು.