Photo Credit : AP
ರಿಯಾದ್, ಸೆ.25: ಸೌದಿ ಅರೇಬಿಯಾದ ಜಿಜಾನ್ ಬಳಿಯ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಗಳು ಕಮಾಂಡ್ ರೂಮ್ಗಳು ಹಾಗೂ ಶಸ್ತ್ರಾಸ್ತ್ರ ಗೋದಾಮುಗಳನ್ನು ಗುರಿಯಾಗಿಸಿಕೊಂಡಿದ್ದವು ಮತ್ತು ಸೌದಿ ಹಾಗೂ ಅದರ ಮಿತ್ರಪಡೆಗಳಿಗೆ ಸಾವುನೋವುಗಳನ್ನು ಉಂಟುಮಾಡಿವೆ ಎಂದು ಹೌದಿಗಳು ಪ್ರತಿಪಾದಿಸಿದ್ದಾರೆ.
ತೈಫ್ ಮತ್ತು ಯಾನ್ಬು ಸೇರಿದಂತೆ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿದ್ದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ಧ್ವಂಸಗೊಳಿಸಿರುವುದಾಗಿ ಸೌದಿ ಪಡೆಗಳು ತಿಳಿಸಿವೆ. ಈ ಮಧ್ಯೆ, ಯಮನ್ ನ ಇತರ ಭಾಗಗಳಲ್ಲೂ ಕಾಳಗ ತೀವ್ರಗೊಂಡಿದ್ದು, ಹೌದಿ ಕಮಾಂಡ್ ಸೆಂಟರ್ ಮೇಲೆ ಸೈಬರ್ ದಾಳಿ ನಡೆದಿರುವ ವರದಿಯಾಗಿದೆ.
ಯಮನ್ನ ಹೌದಿ ಬಂಡುಕೋರರು ಸೌದಿ ಅರೇಬಿಯಾದ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬಲವಾಗಿ ಖಂಡಿಸಿದೆ.
"ಸೌದಿ ಅರೇಬಿಯಾ ವಿರುದ್ಧ ಹೌದಿಗಳು ನಡೆಸುತ್ತಿರುವ ನಿರಂತರ ದಾಳಿಗಳನ್ನು ಭದ್ರತಾ ಮಂಡಳಿಯ ಸದಸ್ಯರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಇದರಲ್ಲಿ ನಾಗರಿಕರು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಿದ ದಾಳಿಗಳೂ ಸೇರಿವೆ. ಈ ದಾಳಿಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ" ಎಂದು ಮಂಡಳಿಯ ಪ್ರಸ್ತುತ ಅಧ್ಯಕ್ಷ ಹಾಗೂ ವಿಶ್ವಸಂಸ್ಥೆಗೆ ಫ್ರಾನ್ಸ್ ರಾಯಭಾರಿ ಜೆರೋಮ್ ಬೊನ್ನಾಫಾಂಟ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ ತಿಳಿಸಿದ್ದಾರೆ.