ಕಾಶ್ಮೀರಿ ಪಂಡಿತರ ನಿರ್ಗಮನದ ವಿಷಯ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ ಭಾರತ
Photo Credit : X
ನ್ಯೂಯಾರ್ಕ್, ಸೆ.25: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಕುರಿತು ಪಾಕಿಸ್ತಾನ ಮಾಡಿದ ಹೇಳಿಕೆಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದು, ತಕ್ಷಣವೇ ಆ ಪ್ರದೇಶವನ್ನು ಖಾಲಿ ಮಾಡುವಂತೆ ಆಗ್ರಹಿಸಿದೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುವುದನ್ನು ಬಿಟ್ಟು, ಸಾಲದ ಸುಳಿಯಲ್ಲಿ ಸಿಲುಕಿರುವ ತನ್ನ ಆರ್ಥಿಕತೆ ಮತ್ತು ಜಾಗತಿಕ ಸಾಲಗಳ ಮೇಲಿನ ಅವಲಂಬನೆಯತ್ತ ಗಮನ ಹರಿಸಬೇಕು ಎಂದು ಭಾರತೀಯ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ ಆಗ್ರಹಿಸಿದರು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತೀವ್ರ ಕಿರುಕುಳವನ್ನು ಉಲ್ಲೇಖಿಸಿದ ತ್ಯಾಗಿ, 1990ರಲ್ಲಿ ಕಾಶ್ಮೀರಿ ಪಂಡಿತರ ಸ್ಥಳಾಂತರದ ವಿಷಯವನ್ನು ಪ್ರಸ್ತಾಪಿಸಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರೇ ಇದಕ್ಕೆ ಕಾರಣ ಎಂದು ಆರೋಪಿಸಿದರು.