Pakistan | ‘ನಾನು ಜೀವಂತವಾಗಿ ಹೊರಬರುತ್ತೇನೋ ಗೊತ್ತಿಲ್ಲ’: ಜೈಲಿನಿಂದ ಇಮ್ರಾನ್ ಖಾನ್ ಕಳವಳ
ಬಲಗಣ್ಣಿನ ಶೇ. 85ರಷ್ಟು ದೃಷ್ಟಿ ನಷ್ಟ, ಪತ್ನಿಯ ಕಣ್ಣಿನ ಸ್ಥಿತಿಯೂ ಗಂಭೀರ; ತುರ್ತು ಚಿಕಿತ್ಸೆಗಾಗಿ ನ್ಯಾಯಾಲಯಗಳ ಮೊರೆ
ಇಮ್ರಾನ್ ಖಾನ್ | Photo Credit : PTI
ಇಸ್ಲಾಮಾಬಾದ್: ಜೈಲಿನಲ್ಲಿ ದಿನಕ್ಕೆ 22 ಗಂಟೆಗಳ ಕಾಲ ಏಕಾಂತವಾಸದಲ್ಲಿ ಇರಿಸಲಾಗುತ್ತಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆಯೂ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ತಾವು ಜೀವಂತವಾಗಿ ಜೈಲಿನಿಂದ ಹೊರಬರುವುದು ಕಷ್ಟವಾಗಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.
ತಮಗೆ ಮತ್ತು ತಮ್ಮ ಪತ್ನಿ ಬುಶ್ರಾ ಬಿಬಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಕೋರಿ ಖಾನ್ ದೇಶದ ಉನ್ನತ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಹದಗೆಡುತ್ತಿರುವುದಕ್ಕೆ ಜೈಲಿನಲ್ಲಿನ ನಿರ್ಬಂಧಗಳೇ ಕಾರಣ ಎಂದು ಆರೋಪಿಸಿರುವ ಅವರು, ಈ ಹಿಂದೆ ನ್ಯಾಯಾಲಯಗಳು ನೀಡಿದ್ದ ವೈದ್ಯಕೀಯ ನೆರವಿನ ಆದೇಶಗಳನ್ನೂ ಅಧಿಕಾರಿಗಳು ಪಾಲಿಸಿಲ್ಲ ಎಂದು ದೂರಿದ್ದಾರೆ.
ಪಾಕಿಸ್ತಾನದ ಫೆಡರಲ್ ಸಾಂವಿಧಾನಿಕ ನ್ಯಾಯಾಲಯ, ಸುಪ್ರೀಂ ಕೋರ್ಟ್ ಮತ್ತು ಇಸ್ಲಾಮಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಉದ್ದೇಶಿಸಿ ಖಾನ್ ಪತ್ರ ಬರೆದಿದ್ದಾರೆ. ಅವರ ಪರ ವಕೀಲ ಬ್ಯಾರಿಸ್ಟರ್ ಸಲ್ಮಾನ್ ಸಫ್ದಾರ್ ಈ ಪತ್ರವನ್ನು ಸಾಮಾಜಿಕ ಜಾಲ ತಾಣ 'ಎಕ್ಸ್' ನಲ್ಲಿ ಹಂಚಿಕೊಂಡಿದ್ದಾರೆ.
ನ. 11ರಂದು ಅದಿಯಾಲಾ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾಗಿದ್ದ ವಕೀಲರಿಗೆ, ತಮ್ಮ ಆತಂಕಗಳನ್ನು ನ್ಯಾಯಾಧೀಶರ ಗಮನಕ್ಕೆ ತರುವಂತೆ ಅವರು ಸೂಚಿಸಿದ್ದರು.
"ಆರ್ಥಿಕವಾಗಿ ದುರ್ಬಲರಾದವರಿಗೂ ಉಚಿತ ಚಿಕಿತ್ಸೆ ದೊರೆಯಲಿ ಎಂಬ ಉದ್ದೇಶದಿಂದ ನನ್ನ ಜೀವನವನ್ನೇ ಆಸ್ಪತ್ರೆಗಳ ನಿರ್ಮಾಣಕ್ಕೆ ಮುಡಿಪಾಗಿಟ್ಟಿದ್ದೆ. ಆದರೆ, ಇಂದು ನನಗೂ ನನ್ನ ಪತ್ನಿಗೂ ಚಿಕಿತ್ಸೆ ದೊರೆಯಬೇಕು ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ" ಎಂದು ಖಾನ್ ಪತ್ರದಲ್ಲಿ ಬರೆದಿದ್ದಾರೆ.
ಜೈಲಿನಲ್ಲಿ ತಮ್ಮನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲಾಗಿದೆ ಎಂದು ಖಾನ್ ಆರೋಪಿಸಿದ್ದಾರೆ. ಕುಟುಂಬದವರು ಮತ್ತು ವಕೀಲರನ್ನು ಭೇಟಿಯಾಗಲು ಅವಕಾಶವಿಲ್ಲ. ಪುತ್ರರೊಂದಿಗೆ ದೂರವಾಣಿಯಲ್ಲಿ ಮಾತನಾಡಲೂ ಅನುಮತಿ ನೀಡುತ್ತಿಲ್ಲ. ಪುಸ್ತಕಗಳನ್ನು ಓದಲು, ಟಿವಿ ವೀಕ್ಷಿಸಲೂ ಅವಕಾಶವಿಲ್ಲ. ದಿನದ 24 ಗಂಟೆಗಳಲ್ಲಿ 22 ಗಂಟೆಗಳನ್ನು ಏಕಾಂತ ಸೆಲ್ ನಲ್ಲೇ ಕಳೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ನಿರ್ಬಂಧಗಳಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ತಮ್ಮ ವಕೀಲರನ್ನು ಕೇವಲ ನಾಲ್ಕು ಬಾರಿ ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗಿದೆ. ಪತ್ನಿ ಬುಶ್ರಾ ಬಿಬಿ ಅವರಿಗೆ ವಕೀಲರನ್ನು ಭೇಟಿಯಾಗಲು ಒಂದೇ ಬಾರಿ ಅವಕಾಶ ನೀಡಲಾಗಿದೆ. ಪತ್ನಿಯೊಂದಿಗಿನ ವಾರದ ಭೇಟಿಯನ್ನೂ ಯಾವುದೇ ಕಾರಣ ನೀಡದೆ ರದ್ದುಗೊಳಿಸಲಾಗಿದೆ. ಬಂಧನದಲ್ಲಿರುವ ತಮ್ಮ ಸಹೋದರಿಯರನ್ನು ಭೇಟಿಯಾಗಲು ಕೂಡ ಅನುಮತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜೈಲಿನ ವೈದ್ಯಕೀಯ ಮಂಡಳಿ ತಮ್ಮಲ್ಲಿನ ಆತಂಕದ ಸಮಸ್ಯೆಯನ್ನು ಗುರುತಿಸಿತ್ತು. ಪತ್ನಿ ಮತ್ತು ಕುಟುಂಬದವರೊಂದಿಗೆ ಹೆಚ್ಚು ಬಾರಿ ಸಂಪರ್ಕಕ್ಕೆ ಅವಕಾಶ ನೀಡಬೇಕು. ಓದಲು ಪುಸ್ತಕಗಳು ಹಾಗೂ ಟಿವಿ ಒದಗಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸುಗಳನ್ನು ಜೈಲು ಅಧಿಕಾರಿಗಳು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.
"ಜೈಲಿನಲ್ಲಿರುವ ಯಾರಿಗೂ ನನ್ನೊಂದಿಗೆ ಮಾತನಾಡಲು ಅಥವಾ ನನ್ನ ಮಾತಿಗೆ ಉತ್ತರಿಸಲು ಅನುಮತಿಯಿಲ್ಲ. ನಾನು ಅವರಿಗೆ 'ಸಲಾಮ್' ಹೇಳಿದರೂ, ಪವಿತ್ರ ಕುರಾನ್ನ ವಚನ ಪಠಿಸಿದರೂ ಅವರು ಪ್ರತಿಕ್ರಿಯಿಸುವಂತಿಲ್ಲ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದು ಮತ್ತು ಆರೋಗ್ಯ ಹದಗೆಡಿಸುವುದೇ ಈ ನಿರ್ಬಂಧಗಳ ಉದ್ದೇಶ ಎಂದು ಖಾನ್ ಆರೋಪಿಸಿದ್ದಾರೆ.
ಬಲಗಣ್ಣಿನ ದೃಷ್ಟಿಯ ಶೇ. 85ರಷ್ಟು ನಷ್ಟ
ಫೆಬ್ರವರಿ 10ರಂದು ತಮ್ಮನ್ನು ಭೇಟಿಯಾದ ವಕೀಲರು ಬಲಗಣ್ಣಿನ ದೃಷ್ಟಿಶಕ್ತಿಯ ಶೇ. 85ರಷ್ಟು ಭಾಗ ಕಳೆದುಹೋಗಿರುವುದನ್ನು ಪತ್ತೆಹಚ್ಚಿದ್ದರು ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ. ಈ ಗಂಭೀರ ಸಮಸ್ಯೆಯ ಬಗ್ಗೆ ತಮ್ಮ ಕುಟುಂಬದವರಿಗಾಗಲಿ, ಕಾನೂನು ಸಲಹೆಗಾರರಿಗಾಗಲಿ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಜೈಲಿನಲ್ಲಿದ್ದ ಅವಧಿಯಲ್ಲಿ ತಮ್ಮ ರಕ್ತದೊತ್ತಡವೂ ನಿರಂತರವಾಗಿ ಹೆಚ್ಚಾಗಿದೆ. ಆರಂಭದಲ್ಲಿ 130ರಿಂದ 150ರಷ್ಟಿದ್ದ ರಕ್ತದೊತ್ತಡ ಬಳಿಕ 170ಕ್ಕೆ ಏರಿತ್ತು. ನ. 10ರಂದು ಅದು 192 ಮತ್ತು 193ರ ಮಟ್ಟ ತಲುಪಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ರಕ್ತದೊತ್ತಡದ ಈ ಏರಿಕೆಯಿಂದ ಮಿದುಳಿನಲ್ಲಿ ರಕ್ತಸ್ರಾವವಾಗಬಹುದು ಅಥವಾ ಹೃದಯ ಸ್ತಂಭನ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ತಮ್ಮ ಹೃದಯಕ್ಕೂ ಈಗಾಗಲೇ ಹಾನಿಯಾಗಿದೆ ಎಂದು ಖಾನ್ ಹೇಳಿದ್ದಾರೆ.
"74ನೇ ವಯಸ್ಸಿನಲ್ಲಿ ಇಂತಹ ನಿರಂತರ ಸಂಕಷ್ಟವನ್ನು ಎದುರಿಸುತ್ತಿದ್ದೇನೆ. ಈ ಪರಿಸ್ಥಿತಿ ನನ್ನನ್ನು ಜೀವಂತವಾಗಿ ಹೊರಬರಲಾರದ ಹಂತಕ್ಕೆ ಕೊಂಡೊಯ್ಯಬಹುದು" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಏಕಾಂತ ಸೆಲ್ ನಿಂದಲೇ ಪತ್ರ ಬರೆದಿರುವುದಾಗಿ ತಿಳಿಸಿರುವ ಅವರು, "ಜೈಲಿನ ಗೋಡೆಗಳಾಚೆಗೆ ನನ್ನ ಧ್ವನಿ ತಲುಪಿಸಲು ಇರುವ ಏಕೈಕ ಮಾರ್ಗ ಇದಾಗಿದೆ" ಎಂದಿದ್ದಾರೆ. ಕಾನೂನು ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ನೆರವು ಕೋರುತ್ತಿದ್ದೇನೆ ಎಂಬ ಆರೋಪವನ್ನೂ ತಳ್ಳಿಹಾಕಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳನ್ನು ಕಾನೂನುಬದ್ಧವಾಗಿ ಎದುರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪತ್ನಿ ಬುಶ್ರಾ ಬೀಬಿ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದ್ದು, ಇದೇ ನ್ಯಾಯಾಲಯಗಳಿಗೆ ಪತ್ರ ಬರೆಯಲು ತಕ್ಷಣದ ಕಾರಣ ಎಂದು ಖಾನ್ ತಿಳಿಸಿದ್ದಾರೆ.
ಎಪ್ರಿಲ್ ನಲ್ಲಿ ಬುಶ್ರಾ ಬೀಬಿ ಅವರ ಕಣ್ಣಿನ ರೆಟಿನಾ ಬೇರ್ಪಟ್ಟಿತ್ತು. ಈ ಸಮಸ್ಯೆಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಗೌಪ್ಯವಾಗಿ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಅವರನ್ನು ಮತ್ತೆ ಏಕಾಂತ ಸೆಲ್ ಗೆ ಕಳುಹಿಸಲಾಗಿತ್ತು ಎಂದು ಖಾನ್ ಆರೋಪಿಸಿದ್ದಾರೆ.
ಈ ತಿಂಗಳು ಪತ್ನಿಯನ್ನು ಭೇಟಿಯಾದಾಗ ಬೆಳಕನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕಣ್ಣುಗಳನ್ನು ತೆರೆಯಲೂ ಕಷ್ಟಪಡುತ್ತಿದ್ದರು ಎಂದು ವಿವರಿಸಿದ್ದಾರೆ. ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
ಬುಶ್ರಾ ಬೀಬಿ ಅವರ ವೈದ್ಯಕೀಯ ದಾಖಲೆಗಳನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ತಮ್ಮ ಆಯ್ಕೆಯ ವೈದ್ಯರಿಂದ ಚಿಕಿತ್ಸೆ ಪಡೆಯಲೂ ಅವಕಾಶ ನೀಡುತ್ತಿಲ್ಲ ಎಂದು ಖಾನ್ ಆರೋಪಿಸಿದ್ದಾರೆ. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲೂ ವಿಳಂಬವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬುಶ್ರಾ ಬೀಬಿ ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೇತ್ರತಜ್ಞರಿಂದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಸ್ವಂತ ಖರ್ಚಿನಲ್ಲಿ ತಮ್ಮ ಆಯ್ಕೆಯ ವೈದ್ಯರಿಂದ ಚಿಕಿತ್ಸೆ ಪಡೆಯಲು ಅನುಮತಿ ಕೋರಿದ್ದಾರೆ. ವೈದ್ಯರು ಅವರಿಗೆ ಮುಂದುವರಿದ ಹಂತದ ಕಣ್ಣಿನ ಪೊರೆ ಇರುವುದನ್ನು ಗುರುತಿಸಿದ್ದು, ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೇ?
ತಮ್ಮನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನೂ ಅಧಿಕಾರಿಗಳು ಪಾಲಿಸಿಲ್ಲ ಎಂದು ಖಾನ್ ಆರೋಪಿಸಿದ್ದಾರೆ.
ಆ. 18ರಂದು ಸುಪ್ರೀಂ ಕೋರ್ಟ್, ಎರಡು ದಿನಗಳೊಳಗೆ ತಮ್ಮನ್ನು ಇಸ್ಲಾಮಾಬಾದ್ ನ ಶಿಫಾ ಇಂಟರ್ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತ್ತು. ವೈದ್ಯಕೀಯ ಮಂಡಳಿ ತಮ್ಮನ್ನು ಪರೀಕ್ಷಿಸಬೇಕು ಮತ್ತು ಕುಟುಂಬದವರೊಂದಿಗೆ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು ಎಂದೂ ಆದೇಶಿಸಿತ್ತು.
ಆದರೆ, ಈ ಆದೇಶ ಜಾರಿಯಾಗಿಲ್ಲ ಎಂದು ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರವು ಕಣ್ಣಿನ ಪರೀಕ್ಷೆಗಾಗಿ ತಮ್ಮನ್ನು ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ಕರೆದೊಯ್ದಿತ್ತು. ಪರೀಕ್ಷೆಯ ಬಳಿಕ ಮತ್ತೆ ಜೈಲಿಗೆ ವಾಪಸ್ ಕಳುಹಿಸಿತ್ತು.
ಆಸ್ಪತ್ರೆಯ ಹೊರಗೆ ಪಿಟಿಐ ಕಾರ್ಯಕರ್ತರು ಜಮಾಯಿಸಿದ್ದರಿಂದ ಭದ್ರತಾ ಆತಂಕ ಉಂಟಾಗಿತ್ತು. ಹೀಗಾಗಿ ಆಸ್ಪತ್ರೆ ವರ್ಗಾವಣೆಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಯಿತು ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ. ಆದರೆ, ಪಿಟಿಐ ಈ ಹೇಳಿಕೆಯನ್ನು ನಿರಾಕರಿಸಿದ್ದು, ಸರಕಾರ ಕೋರ್ಟ್ ಆದೇಶವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.
ತಮ್ಮ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯಗಳು ತ್ವರಿತವಾಗಿ ವಿಚಾರಣೆ ನಡೆಸುತ್ತಿಲ್ಲ ಎಂದೂ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಬಾಕಿ ಅರ್ಜಿಗಳಿಗಿಂತ ತೋಷಖಾನಾ-2 ಪ್ರಕರಣದಲ್ಲಿನ ತಮ್ಮ ಮೇಲ್ಮನವಿಯನ್ನು ಮೊದಲು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ತೋಷಖಾನಾ-2 ಪ್ರಕರಣದಲ್ಲಿ 17 ವರ್ಷ ಶಿಕ್ಷೆ
2021ರಲ್ಲಿ ಸೌದಿ ಅರೇಬಿಯದ ಕ್ರೌನ್ ಪ್ರಿನ್ಸ್ ಅವರು ಅಧಿಕೃತ ಭೇಟಿಯ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರಿಗೆ ಬಲ್ಗರಿ ಆಭರಣಗಳ ಸೆಟ್ ಉಡುಗೊರೆಯಾಗಿ ನೀಡಿದ್ದರು. ಈ ಆಭರಣಗಳ ಖರೀದಿಗೆ ಸಂಬಂಧಿಸಿದ ತೋಷಖಾನಾ-2 ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಅವರಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2022ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡ ಬಳಿಕ ತಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಖಾನ್ ತಿಳಿಸಿದ್ದಾರೆ. ಆದರೆ, ಎಲ್ಲ ಪ್ರಕರಣಗಳನ್ನೂ ನ್ಯಾಯಾಲಯಗಳ ಮೂಲಕವೇ ಎದುರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ತಮಗೂ ತಮ್ಮ ಪತ್ನಿಗೂ ವೈದ್ಯಕೀಯ ನೆರವು ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಕಾನೂನು ವ್ಯವಸ್ಥೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
"ನಾನು ನ್ಯಾಯಾಲಯಗಳಿಂದ ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೊಳಿಸಬೇಕು ಮತ್ತು ನನಗೆ ಹಾಗೂ ನನ್ನ ಪತ್ನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂಬ ನ್ಯಾಯಯುತ ಬೇಡಿಕೆಯನ್ನಷ್ಟೇ ಮುಂದಿಡುತ್ತಿದ್ದೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.
ತಾವು ಜೀವಂತವಾಗಿದ್ದರೆ ಮಾತ್ರ ತಮ್ಮ ನಿರ್ದೋಷಿ ಎಂದು ಸಾಬೀತುಪಡಿಸಲು ಸಾಧ್ಯ ಎಂದು ಹೇಳಿರುವ ಖಾನ್, "ತುಂಬಾ ತಡವಾಗುವ ಮೊದಲೇ ನ್ಯಾಯಾಧೀಶರು ಮಧ್ಯಪ್ರವೇಶಿಸಬೇಕು" ಎಂದು ಮನವಿ ಮಾಡಿದ್ದಾರೆ.