ಯುನೈಟೆಡ್ ಏರ್‌ಲೈನ್ಸ್ ನ 418 ವಿಮಾನಗಳ ಹಾರಾಟದಲ್ಲಿ ವಿಳಂಬ: ಅಮೆರಿಕದಲ್ಲಿ ಮತ್ತೆ ತಾಂತ್ರಿಕ ದೋಷ
ವಿಮಾನಗಳ ಅಂತಿಮ ತೂಕ ನಿರ್ಧರಿಸುವ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಸಮಸ್ಯೆ; ಒಂದೂವರೆ ಗಂಟೆಯೊಳಗೆ ಸರಿಪಡಿಸಿದ ಕಂಪೆನಿ
ವಾಷಿಂಗ್ಟನ್: ಅಮೆರಿಕದ ಯುನೈಟೆಡ್ ಏರ್‌ಲೈನ್ಸ್ ನ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಸೋಮವಾರ ಉಂಟಾದ ತಾಂತ್ರಿಕ ದೋಷದಿಂದ ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ವಿಮಾನಗಳ ಹಾರಾಟದ ಮಾಹಿತಿ ನೀಡುವ ಫ್ಲೈಟ್‌ಅವೇರ್ ವೆಬ್‌ಸೈಟ್ ಪ್ರಕಾರ, ಸೋಮವಾರ ಮಧ್ಯಾಹ್ನದ ವೇಳೆಗೆ ಕಂಪೆನಿಯ 418 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು.
ಚಿಕಾಗೊ ಮೂಲದ ಯುನೈಟೆಡ್ ಏರ್‌ಲೈನ್ಸ್, ಸೋಮವಾರ ಮಧ್ಯಾಹ್ನ ತನ್ನ ಕೆಲವು ವಿಮಾನಗಳ ಹಾರಾಟ ವಿಳಂಬವಾಗಿರುವುದನ್ನು ದೃಢಪಡಿಸಿದೆ. ಆದರೆ, ಈಗಾಗಲೇ ಹಾರಾಟದಲ್ಲಿದ್ದ ವಿಮಾನಗಳು ಹಾಗೂ ಯುನೈಟೆಡ್ ಎಕ್ಸ್‌ಪ್ರೆಸ್ ನ ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆಗೆ ಈ ಸಮಸ್ಯೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದೆ.
ಈ ತಾಂತ್ರಿಕ ಸಮಸ್ಯೆ ಸೈಬರ್ ಭದ್ರತೆಗೆ ಸಂಬಂಧಿಸಿದ್ದಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ. ಸಮಸ್ಯೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆಯಾಚಿಸಿದೆ.
ಪೈಲಟ್ ಗಳು ವಾಯು ಸಂಚಾರ ನಿಯಂತ್ರಕರಿಗೆ ಸಮಸ್ಯೆಯ ಬಗ್ಗೆ ಮೊದಲ ಬಾರಿಗೆ ಮಾಹಿತಿ ನೀಡಿದ ಸುಮಾರು ಒಂದೂವರೆ ಗಂಟೆಯ ಬಳಿಕ ಅದನ್ನು ಸರಿಪಡಿಸಲಾಗಿದೆ. ಆದರೆ, ಯಾವ ಕಂಪ್ಯೂಟರ್ ವ್ಯವಸ್ಥೆಗಳು ಸಮಸ್ಯೆಗೆ ಒಳಗಾಗಿದ್ದವು ಎಂಬ ಬಗ್ಗೆ ಕಂಪೆನಿ ತಕ್ಷಣಕ್ಕೆ ಯಾವುದೇ ವಿವರ ನೀಡಿಲ್ಲ.
ವಿಮಾನ ಸುರಕ್ಷಿತವಾಗಿ ಟೇಕ್‌ಆಫ್ ಆಗಲು ಅಗತ್ಯವಿರುವ ಅದರ ಅಂತಿಮ ತೂಕವನ್ನು ನಿರ್ಧರಿಸುವ ಕಂಪೆನಿಯ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿತ್ತು ಎಂದು ಪೈಲಟ್ ಗಳು ವಾಯು ಸಂಚಾರ ನಿಯಂತ್ರಕರಿಗೆ ತಿಳಿಸಿದ್ದಾರೆ.
ಹ್ಯೂಸ್ಟನ್ ನಲ್ಲಿ ಯುನೈಟೆಡ್ ಏರ್‌ಲೈನ್ಸ್ ನ ಪೈಲಟ್ ಒಬ್ಬರು, ವ್ಯವಸ್ಥೆ ಮತ್ತೆ ಸರಿಯಾಗಿ ಕಾರ್ಯನಿರ್ವಹಿಸುವವರೆಗೆ ವಿಮಾನವನ್ನು ಗೇಟ್ ನಲ್ಲೇ ನಿಲ್ಲಿಸಲು ಅನುಮತಿ ಕೋರುತ್ತಿರುವುದು ವಾಯು ಸಂಚಾರ ನಿಯಂತ್ರಣ ಆ್ಯಪ್ ನ ವಾಯ್ಸ್ ರೆಕಾರ್ಡಿಂಗ್ ನಲ್ಲಿ ದಾಖಲಾಗಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA)ನ ನೆಟ್‌ವರ್ಕ್ ನಲ್ಲಿ ತಾಂತ್ರಿಕ ದೋಷ ಉಂಟಾಗಿ ದೇಶಾದ್ಯಂತ ವಿಮಾನಗಳ ಹಾರಾಟ ಸ್ಥಗಿತಗೊಂಡ ಕೆಲವೇ ದಿನಗಳಲ್ಲಿ ಯುನೈಟೆಡ್ ಏರ್‌ಲೈನ್ಸ್ ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕದ ಹಲವು ಪ್ರಮುಖ ಸಂಸ್ಥೆಗಳು ತಾಂತ್ರಿಕ ವ್ಯತ್ಯಯಗಳನ್ನು ಎದುರಿಸುತ್ತಿವೆ. ಸೋಮವಾರವೇ ಜೆಪಿ ಮಾರ್ಗನ್ ಚೇಸ್ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್ ಗಳ ಆನ್‌ಲೈನ್ ಖಾತೆಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ದೂರು ನೀಡಿದ್ದರು. ತಾಂತ್ರಿಕ ಸಮಸ್ಯೆಯಿಂದ ಈ ವ್ಯತ್ಯಯ ಉಂಟಾಗಿತ್ತು ಎಂದು ಜೆಪಿ ಮಾರ್ಗನ್ ಚೇಸ್ ತಿಳಿಸಿತ್ತು.
ಇದಕ್ಕೂ ಮುನ್ನ ಶುಕ್ರವಾರ, ಹೊಸದಾಗಿ ಅಳವಡಿಸಿದ್ದ ರೌಟರ್ ನಲ್ಲಿ ದೋಷ ಉಂಟಾಗಿ ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ FAA ಎಲ್ಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ಇದಕ್ಕೆ ಒಂದು ದಿನ ಮೊದಲು ಮೈಕ್ರೋಸಾಫ್ಟ್‌ನ ಔಟ್‌ಲುಕ್ ಇಮೇಲ್ ಸೇವೆಯಲ್ಲಿಯೂ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿತ್ತು. ಶನಿವಾರದ ವೇಳೆಗೆ ಸೇವೆಯನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿತ್ತು.