ಥಾಮಸ್ ಕುರಿಯನ್ | Photo Credit : googlecloudpresscorner.com 

ವಾಷಿಂಗ್ಟನ್: ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕಂಪೆನಿಯಾಗಿರುವ ಎನ್‌ವಿಡಿಯಾ, ನೂತನ ಸಿಇಒ ಆಯ್ಕೆ ಪ್ರಕ್ರಿಯೆಯಲ್ಲಿದೆ. 1993ರಲ್ಲಿ ಕಂಪೆನಿ ಸ್ಥಾಪನೆಯಾದಾಗಿನಿಂದ ಅದರ ನೇತೃತ್ವ ವಹಿಸಿದ್ದ ಜೆನ್ಸನ್ ಹುವಾಂಗ್ ಅವರ ವಿರುದ್ಧದ ವಿವಾಹೇತರ ಸಂಬಂಧಗಳ ಕುರಿತ ಸರಣಿ ಆರೋಪಗಳ ಹಿನ್ನೆಲೆಯಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು.

ಈ ಹಿನ್ನೆಲೆಯಲ್ಲಿ ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮತ್ತು ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಕಂಪನಿಗೆ ಶಾಶ್ವತ ಸಿಇಒ ಆಯ್ಕೆ ಮಾಡಲು ಆಡಳಿತ ಮಂಡಳಿ ಹುಡುಕಾಟ ಮುಂದುವರಿಸಿದೆ.

ಕಳೆದ ಕೆಲವು ದಿನಗಳಿಂದ ಉನ್ನತ ಕಂಪೆನಿಗಳಲ್ಲಿ ನಾಯಕತ್ವದ ಹುದ್ದೆಯಲ್ಲಿರುವ ಹಲವು ಹೆಸರುಗಳು ಈ ಹುದ್ದೆಯ ಸಂಭಾವ್ಯ ಅಭ್ಯರ್ಥಿಗಳಾಗಿ ಚರ್ಚೆಯಾಗುತ್ತಿವೆ. ಕಂಪೆನಿಯೊಳಗಿನ ಮತ್ತು ಹೊರಗಿನ ವ್ಯಕ್ತಿಗಳ ಹೆಸರುಗಳು ಕೇಳಿಬರುತ್ತಿವೆ. ಈ ಪೈಕಿ ಸದ್ಯ ಗೂಗಲ್ ಕ್ಲೌಡ್‌ನ ಸಿಇಒ ಆಗಿರುವ ಥಾಮಸ್ ಕುರಿಯನ್ ಅವರ ಹೆಸರೂ ಪ್ರಮುಖವಾಗಿ ಪ್ರಸ್ತಾಪವಾಗಿದೆ.

ಯಾರು ಥಾಮಸ್ ಕುರಿಯನ್?

1966ರಲ್ಲಿ ಕೇರಳದ ಕೊಟ್ಟಾಯಂನಲ್ಲಿ ಥಾಮಸ್ ಕುರಿಯನ್ ಜನಿಸಿದರು. ಗ್ರಾಫೈಟ್ ಇಂಡಿಯಾದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ರಾಸಾಯನಿಕ ಎಂಜಿನಿಯರ್ ಪಿ.ಸಿ. ಕುರಿಯನ್ ಮತ್ತು ಮೋಲಿ ದಂಪತಿಯ ನಾಲ್ವರು ಮಕ್ಕಳಲ್ಲಿ ಥಾಮಸ್ ಒಬ್ಬರು. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪಡೆದ ಅವರು ಬಳಿಕ ಐಐಟಿ ಮದ್ರಾಸ್‌ಗೆ ಸೇರಿದರು.

17ನೇ ವಯಸ್ಸಿನಲ್ಲಿ ತಮ್ಮ ಅವಳಿ ಸಹೋದರ ಜಾರ್ಜ್ ಕುರಿಯನ್ ಅವರೊಂದಿಗೆ ಅಮೆರಿಕಕ್ಕೆ ತೆರಳಿದರು. ಅಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಎಂಬಿಎ ಪದವಿ ಗಳಿಸಿದರು.

1990ರಿಂದ 1996ರವರೆಗೆ ಮೆಕಿನ್ಸೆ ಆ್ಯಂಡ್ ಕಂಪೆನಿಯಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ವೃತ್ತಿಜೀವನ ಆರಂಭಿಸಿ, ಬಿಸಿನೆಸ್ ಅನಾಲಿಸ್ಟ್ ಮತ್ತು ಎಂಗೇಜ್‌ಮೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು.

1996ರಲ್ಲಿ ಒರಾಕಲ್ ಕಂಪೆನಿಗೆ ಸೇರ್ಪಡೆಯಾದ ಅವರು, ಅಲ್ಲಿ 22 ವರ್ಷಗಳ ಕಾಲ ಕೆಲಸ ಮಾಡಿದರು. ಈ ಅವಧಿಯಲ್ಲಿ ಕಂಪೆನಿಯ ಉತ್ಪನ್ನ ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ಉನ್ನತ ಹುದ್ದೆಗೇರಿದರು. ಅಲ್ಲದೆ, ಬಹುಕೋಟಿ ಡಾಲರ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್ ಡಿ) ವಿಭಾಗದ ಬಜೆಟ್ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.

ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಬಂಧಿಸಿದ ಕಾರ್ಯತಂತ್ರದ ವಿಚಾರದಲ್ಲಿ ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಒರಾಕಲ್‌ಗೆ ರಾಜೀನಾಮೆ ನೀಡಿದರು.

ಎರಡು ತಿಂಗಳ ಬಳಿಕ, ಅಂದರೆ 2018ರ ನವೆಂಬರ್‌ನಲ್ಲಿ ಗೂಗಲ್ ಸೇರಿದರು. ಪ್ರಸ್ತುತ ಗೂಗಲ್ ಕ್ಲೌಡ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಅತಿ ಹೆಚ್ಚು ಸಂಭಾವನೆ ಪಡೆಯುವ ತಂತ್ರಜ್ಞಾನ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಕುರಿಯನ್ ಅವರ ಸಂಪತ್ತು ಆಲ್ಫಾಬೆಟ್ ಷೇರುಗಳ ಮೌಲ್ಯವನ್ನು ಅವಲಂಬಿಸಿ ಸುಮಾರು 180 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.

ಅವರ ಅವಳಿ ಸಹೋದರ ಜಾರ್ಜ್ ಕುರಿಯನ್ ಕೂಡ ಥಾಮಸ್ ಅವರೊಂದಿಗೆ ಅಮೆರಿಕಕ್ಕೆ ತೆರಳಿದ್ದರು. ಪ್ರಸ್ತುತ ಅವರು ನೆಟ್‌ಆ್ಯಪ್ ಕಂಪನಿಯ ಸಿಇಒ ಆಗಿದ್ದಾರೆ.

ಇನ್ನೊಂದೆಡೆ, ಎನ್‌ವಿಡಿಯಾದಲ್ಲಿ ಸಿಇಒ ಆಯ್ಕೆಗೆ ಸಂಬಂಧಿಸಿದ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವಂತೆ ಒತ್ತಾಯಿಸಿ ಆನ್‌ಲೈನ್ ಅರ್ಜಿಗೆ 1.32 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್, ರಿಪ್ಲಿಟ್ ಸಿಇಒ ಅಮ್ಜದ್ ಮಸಾದ್ ಹಾಗೂ ಎಪಿಕ್ ಗೇಮ್ಸ್ ಸಿಇಒ ಟಿಮ್ ಸ್ವೀನಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ವ್ಯಕ್ತಿಗಳೂ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್‌ ಫೈಝಲ್‌ , ವಾರ್ತಾ ಭಾರತಿ

contributor