ಇರಾನ್ ಮೇಲೆ ಅಮೆರಿಕ ದಾಳಿಗಳ ಬಳಿಕ ವಿಕಿರಣ ಮಟ್ಟದಲ್ಲಿ ಏರಿಕೆ ವರದಿಯಾಗಿಲ್ಲ: ಐಎಇಎ
Photo credit: PTI
ವಾಷಿಂಗ್ಟನ್ ಡಿಸಿ: ಫೊರ್ದೊ ಸೇರಿದಂತೆ ಇರಾನಿನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಗಳ ಬಳಿಕ ಅಲ್ಲಿ ವಿಕಿರಣ ಮಟ್ಟದಲ್ಲಿ ಯಾವುದೇ ಏರಿಕೆ ವರದಿಯಾಗಿಲ್ಲ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯು ರವಿವಾರ ಹೇಳಿದೆ.
ತನ್ನ ಪರಮಾಣು ರಕ್ಷಣಾ ಕೇಂದ್ರವು ದೇಶದ ವಾಯುಪ್ರದೇಶದಲ್ಲಿ ಮತ್ತು ನೀರಿನಲ್ಲಿ ವಿಕಿರಣಶೀಲ ಕುರುಹುಗಳಲ್ಲಿ ಯಾವುದೇ ಏರಿಕೆಯನ್ನು ಗುರುತಿಸಿಲ್ಲ ಎಂದು ಕುವೈಟ್ ಕೂಡ ತಿಳಿಸಿದೆ.
ರವಿವಾರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿರುವ ಇರಾನ್, ತನ್ನನ್ನು ರಕ್ಷಿಸಿಕೊಳ್ಳಲು ಎಲ್ಲ ಆಯ್ಕೆಗಳನ್ನು ತಾನು ಕಾಯ್ದಿರಿಸಿಕೊಂಡಿದ್ದೇನೆ ಎಂದು ಹೇಳಿದೆ. ಇದಕ್ಕೂ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನಿನ ಪ್ರಮುಖ ಪರಮಾಣು ಸ್ಥಾವರಗಳನ್ನು ನಾಶಗೊಳಿಸಲಾಗಿದೆ ಎಂದು ಹೇಳಿದ್ದರು.
ಇರಾನ್‌ಗೆ ಬಿ-2 ಬಾಂಬರ್ ವಿಮಾನಗಳನ್ನು ರವಾನಿಸುವ ಮೂಲಕ ಟ್ರಂಪ್ ಮಧ್ಯಪ್ರಾಚ್ಯದಲ್ಲಿಯ ಉದ್ವಿಗ್ನತೆಯನ್ನು ಉಲ್ಬಣಗೊಳಿಸಿದ ಬಳಿಕ ಇಸ್ರೇಲ್ ಸೇನೆಯು ಕಳೆದ ಕೆಲವು ದಿನಗಳ ಇರಾನ್ ದಾಳಿಗಳಿಗಿಂತ ಹೆಚ್ಚಿನ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಜನರಿಗೆ ಎಚ್ಚರಿಕೆ ನೀಡಿದೆ.
ಇಂದು ಬೆಳಗ್ಗಿನ ಘಟನೆಗಳು ಅತಿರೇಕದ್ದಾಗಿವೆ ಮತ್ತು ಶಾಶ್ವತ ಪರಿಣಾಮಗಳನ್ನು ಬೀರಲಿವೆ ಎಂದು ಹೇಳಿರುವ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು,ಅಮೆರಿಕದ ದಾಳಿಗಳು ವಿಶ್ವಸಂಸ್ಥೆಯ ಸನ್ನದು, ಅಂತರಾರಾಷ್ಟ್ರೀಯ ಕಾನೂನು ಮತ್ತು ಪರಮಾಣು ಪ್ರಸರಣ ತಡೆ ಒಪ್ಪಂದದ ಘೋರ ಉಲ್ಲಂಘನೆಗಳಾಗಿವೆ ಎಂದು ಬಣ್ಣಿಸಿದ್ದಾರೆ.
ಇರಾನ್ ತನ್ನ ಸಾರ್ವಭೌಮತೆ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಿಕೊಳ್ಳಲು ಎಲ್ಲ ಆಯ್ಕೆಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ಅರಘ್ಚಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ತನ್ನ ‘ರಾಷ್ಟ್ರೀಯ ಉದ್ಯಮ’ದ ಅಭಿವೃದ್ಧಿಯನ್ನು ನಿಲ್ಲಿಸಲು ತಾನು ಅವಕಾಶ ನೀಡುವುದಿಲ್ಲ ಎಂದು ಇರಾನಿನ ಅಣುಶಕ್ತಿ ಸಂಸ್ಥೆಯು ಹೇಳಿದೆ.
ಇದೇ ವೇಳೆ, ಪ್ರದೇಶದಲ್ಲಿರುವ ಅಮೆರಿಕದ ಪ್ರತಿಯೊಬ್ಬ ಪ್ರಜೆ ಅಥವಾ ಮಿಲಿಟರಿ ಸಿಬ್ಬಂದಿ ಕಾನೂನುಬದ್ಧ ಗುರಿಗಳಾಗಲಿದ್ದಾರೆ ಎಂದು ಇರಾನಿನ ಸರಕಾರಿ ಟಿವಿಯ ವ್ಯಾಖ್ಯಾನಕಾರರು ಎಚ್ಚರಿಕೆ ನೀಡಿದ್ದಾರೆ.