ಮಹಾನಗರಗಳಲ್ಲಿ ಹೆಚ್ಚಿದ ಮಾಲಿನ್ಯ: 2 ಲಕ್ಷ ಮಂದಿಗೆ ತೀವ್ರ ಉಸಿರಾಟ ಸಮಸ್ಯೆ
PC: x.com/rushikesh_agre_
ಹೊಸದಿಲ್ಲಿ: ದೇಶದ ಮಹಾನಗರಗಳಲ್ಲಿ ಮಾಲಿನ್ಯಮಟ್ಟ ಅಧಿಕವಾಗುತ್ತಿದ್ದು, ಆಸ್ಪತ್ರೆಗಳಲ್ಲಿ ತೀವ್ರ ಉಸಿರಾಟ ಕಾಯಿಲೆ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ 2022-24ರ ಅವಧಿಯಲ್ಲಿ 2 ಲಕ್ಷ ಮಾಲಿನ್ಯ ಸಂಬಂಧಿ ತೀವ್ರ ಉಸಿರಾಟ ಕಾಯಿಲೆ(ಎಆರ್‌ಐ) ಪ್ರಕರಣಗಳು ದಾಖಲಾಗಿವೆ. ಸಾವಿರಾರು ಮಂದಿ ಈ ಸಮಸ್ಯೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದೆ. ವಾಯುಮಾಲಿನ್ಯದ ಕಾರಣದಿಂದ ಈ ಸಮಸ್ಯೆ ಹೆಚ್ಚುತ್ತಿದೆ ಎಂದು ಸ್ಪಷ್ಟಪಡಿಸಿದೆ.
ರಾಜ್ಯಸಭೆಯಲ್ಲಿ ಡಾ.ವಿಕ್ರಂಜೀತ್ ಸಿಂಗ್ ಸಹಾಯ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯಖಾತೆ ರಾಜ್ಯ ಸಚಿವ ಪ್ರತಾಪರಾವ್ ಜಾಧವ್, ಉಸಿರಾಟ ಕಾಯಿಲೆಗಳಿಗೆ ಮಲಿನ ಗಾಳಿ ಉತ್ತೇಜಕ ಅಂಶವಾಗಿದೆ. ನಗರ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ವಿಸ್ತರಿತ ರಾಷ್ಟ್ರೀಯ ಕಣ್ಗಾವಲು ವ್ಯವಸ್ಥೆಯಡಿ ನಿಗಾ ಇಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ 2022ರಲ್ಲಿ ದೆಹಲಿಯ ಆರು ಕೇಂದ್ರೀಯ ಆಸ್ಪತ್ರೆಗಳಲ್ಲಿ ಒಟ್ಟು 67054 ಎಆರ್‌ಐ ತುರ್ತು ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 69,293 ಮತ್ತು 2024ರಲ್ಲಿ 68411 ಇಂಥ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಆಸ್ಪತ್ರೆ ದಾಖಲಾತಿ 9,878ರಿಂದ 10,819ಕ್ಕೇರಿದೆ. ಚೆನ್ನೈ ಮತ್ತು ಮುಂಬೈನಲ್ಲಿ ಕೂಡಾ ಇಂಥದ್ದೇ ಏರಿಕೆ ಕಂಡುಬಂದಿದ್ದು, ತೀವ್ರ ಮಾಲಿನ್ಯದ ಅವಧಿಯಲ್ಲಿ ಸಾವಿರಾರು ಮಂದಿ ಉಸಿರಾಟದ ಸಮಸ್ಯೆಗಳಿಗಾಗಿ ತುರ್ತು ಆರೈಕೆ ಬಯಸಿ ದಾಖಲಾಗಿದ್ದಾರೆ.
ವಾಯುಮಾಲಿನ್ಯದ ಜತೆಗೆ ಆಹಾರ ಸೇವನೆ ಹವ್ಯಾಸ, ವೃತ್ತಿ, ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ರೋಗನಿರೋಧಕ ಶಕ್ತಿ ಮತ್ತು ವೈದ್ಯಕೀಯ ಇತಿಹಾಸ ಹೀಗೆ ಹಲವು ಅಂಶಗಳು ಇದಕ್ಕೆ ಕಾರಣವಾಗುತ್ತಿವೆ ಎಂದು ಸರ್ಕಾರ ವಿವರಿಸಿದೆ.
ಈ ಸಮಸ್ಯೆಯನ್ನು ನಿಭಾಯಿಸುವ ಸಲುವಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 230 ಕಣ್ಗಾವಲು ಕೇಂದ್ರಗಳನ್ನು ಆರಂಭಿಸಿದೆ. ಡಿಜಿಟಲ್ ಎಆರ್ಐ ಕಣ್ಗಾವಲು ಕೇಂದ್ರಗಳನ್ನು 2023ರ ಆಗಸ್ಟ್ನಲ್ಲಿ ಆರಂಭಿಸಲಾಗಿದೆ.