"ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ": ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ಖಂಡಿಸಿದ ಭಾರತ
ಸಾಂದರ್ಭಿಕ ಚಿತ್ರ (Photo: PTI)
ಹೊಸ ದಿಲ್ಲಿ: ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪದೇ ನಡೆದಿರುವ ದಾಳಿಯನ್ನು ರವಿವಾರ ಭಾರತ ಬಲವಾಗಿ ಖಂಡಿಸಿದೆ. ಈ ದಾಳಿಯಲ್ಲಿ 12 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಅಕ್ಟೋಬರ್ 10ರಂದು ನಡೆದ ಭೀಕರ ದಾಳಿ ಸೇರಿದಂತೆ ಕಳೆದ ಕೆಲವು ದಿನಗಳಿಂದ ರಿಯಾದ್ ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪದೇ ಪದೇ ನಡೆದಿರುವ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದರಿಂದ ಜೀವಹಾನಿ, ಗಾಯಗಳು ಹಾಗೂ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ” ಎಂದು ಹೇಳಿದೆ.
“ನಾವು ಮೃತರ ಕುಟುಂಬದ ಸದಸ್ಯರಿಗೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಹಾಗೂ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳ ಲಿ ಎಂದು ಹಾರೈಸುತ್ತೇವೆ. ನಾಗರಿಕರು ಹಾಗೂ ನಾಗರಿಕ ಮೂಲಭೂತ ಸೌಲಭ್ಯಗಳ ಮೇಲೆ ಪದೇ ಪದೇ ನಡೆದಿರುವ ದಾಳಿಗಳು ಸಂಪೂರ್ಣವಾಗಿ ಸ್ವೀಕಾರ್ಹವಲ್ಲ, ತಕ್ಷಣವೇ ದಾಳಿಗಳನ್ನು ಸ್ಥಗಿತಗೊಳಿಸಬೇಕು” ಎಂದು ಸಚಿವಾಲಯ ಆಗ್ರಹಿಸಿದೆ.
ಸೌದಿ ಅರೇಬಿಯಾಗೆ ಬೆಂಬಲವನ್ನೂ ಸೂಚಿಸಿರುವ ಭಾರತ, “ಸೌದಿ ಅರೇಬಿಯಾ ಹಾಗೂ ಅಲ್ಲಿನ ಜನರ ಸೌರ್ವಭೌಮತೆಯನ್ನು ರಕ್ಷಿಸಲು ನಾವು ಅವರೊಂದಿಗಿದ್ದೇವೆ. ಈ ಪ್ರಾಂತ್ಯದಲ್ಲಿ ಆದಷ್ಟೂ ಶೀಘ್ರವಾಗಿ ಶಾಂತಿ ಮತ್ತು ಸಹಜ ಸ್ಥಿತಿ ಮರಳಲಿ ಎಂದು ಆಶಿಸುತ್ತೇವೆ” ಎಂದು ಹೇಳಿದೆ.
ಈ ನಡುವೆ, ಸೌದಿ ಅರೇಬಿಯಾ ಮೇಲಿನ ದಾಳಿಯನ್ನು ಅಮೆರಿಕ ಕೂಡ ಖಂಡಿಸಿದೆ.