ಖಾಮಿನೈಯವರ ಅಂತ್ಯಕ್ರಿಯೆಯ ದಿನ ಇರಾನ್ ಮೇಲೆ ಬಾಂಬ್ ದಾಳಿ ನಡೆಸಬೇಕು ಎಂದ ಟ್ರಂಪ್ ನಿಷ್ಠಾವಂತೆ ಲೂಮರ್
ಲಾರಾ ಲೂಮರ್ | Photo Credit : AP , PTI
ವಾಶಿಂಗ್ಟನ್, ಜು.2: ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈಯವರ ಅಂತ್ಯಕ್ರಿಯೆ ನಡೆಯಲಿರುವ ಜುಲೈ 9 ರಂದು ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಇಸ್ರೇಲ್ ತನ್ನ ಪ್ರತಿಸ್ಪರ್ಧಿ ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶವಿದೆ ಎಂದು ಪರೋಕ್ಷವಾಗಿ ಸೂಚಿಸುವ ಮೂಲಕ ಕಟ್ಟಾ ಬಲಪಂಥೀಯ ಕಾರ್ಯಕರ್ತೆ ಲಾರಾ ಲೂಮರ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೀರ್ಘಕಾಲದ ಬೆಂಬಲಿಗರಾಗಿರುವ ಲೂಮರ್, ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಕಲ್ಪನೆಯನ್ನು ಸೂಚಿಸುವ ಪೋಸ್ಟ್ ಒಂದನ್ನು ಗುರುವಾರ ಹಂಚಿಕೊಳ್ಳುವ ಮೂಲಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ್ದಾರೆ. ಇರಾನ್ `ಐತಿಹಾಸಿಕ ಅಂತ್ಯಕ್ರಿಯೆ'ಗೆ ತಯಾರಿ ನಡೆಸುತ್ತಿರುವುದರಿಂದ ಖಾಮಿನೈಯವರ ಮೃತದೇಹವನ್ನು ಪ್ರಸ್ತುತ ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಲಾಗಿದೆ ಎಂದು ತಿಳಿಸುವ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು ` ಖಮೇನಿಗೆ ಅಂತ್ಯಕ್ರಿಯೆಯೇ? ಅದನ್ನೇ ನಾವು ಟಾರ್ಗೆಟ್ ಮಾಡಲು ಸೂಕ್ತವಾದ ವಾತಾವರಣ ಎನ್ನುತ್ತೇವೆ ' ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಅದೇ ಮಾಹಿತಿಗೆ ಪ್ರತಿಕ್ರಿಯಿಸುತ್ತಾ `ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ಅತ್ಯಂತ ತಮಾಷೆಯ ಕೆಲಸವನ್ನು ಮಾಡಲು ಒಂದು ಉತ್ತಮ ಅವಕಾಶವನ್ನು ಹೊಂದಿದೆ. ಅಮೆರಿಕ ಅಥವಾ ಐಡಿಎಫ್ ಒಂದು ಗುಂಪು ಜಿಹಾದಿಗಳನ್ನು ಬಾಂಬ್ ಹಾಕಿ ಉಡಾಯಿಸುವುದನ್ನು ನೋಡುವ ಅವಕಾಶಕ್ಕೆ ನಾನು ಎಂದಿಗೂ ಇಲ್ಲ ಎಂದು ಹೇಳುವುದಿಲ್ಲ' ಎಂದು ಬರೆದಿದ್ದಾರೆ.
ಅಮೆರಿಕ, ಇಸ್ರೇಲ್‍ಗೆ ಇರಾನ್ ಎಚ್ಚರಿಕೆ
ಯುದ್ಧದ ಮೊದಲ ದಿನದಂದು ನಡೆದ ವೈಮಾನಿಕ ದಾಳಿಯಲ್ಲಿ ಹತರಾದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಇರಾನ್ ಮೇಲೆ ಯಾವುದೇ ದಾಳಿ ನಡೆಸದಂತೆ ಇರಾನ್ ಮಿಲಿಟರಿ ಕಮಾಂಡರ್ ಗುರುವಾರ ಅಮೆರಿಕ ಮತ್ತು ಇಸ್ರೇಲ್‍ಗೆ ಎಚ್ಚರಿಕೆ ನೀಡಿದ್ದಾರೆ.
`ಇರಾನ್‍ನ ಶತ್ರುಗಳಿಗೆ, ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್‍ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ; ಯಾವುದೇ ತಪ್ಪು ಲೆಕ್ಕಾಚಾರಗಳನ್ನು ಮಾಡಬೇಡಿ. ಯಾವುದೇ ಬೆದರಿಕೆ ಅಥವಾ ಆಕ್ರಮಣಕ್ಕೆ ನಮ್ಮ ಸಶಸ್ತ್ರ ಪಡೆಗಳು ನೀಡಬಹುದಾದ ಕಠಿಣ ಪ್ರತೀಕಾರದ ಬಗ್ಗೆ ಯೋಚಿಸಿ' ಎಂದು ಇರಾನ್ ಮಿಲಿಟರಿ ಕಮಾಂಡರ್ ಅಲಿ ಅಬ್ದುಲ್ಲಾಹಿ ಎಚ್ಚರಿಸಿದ್ದಾರೆ.
ಅಂತ್ಯಕ್ರಿಯೆಯ ಅವಧಿಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟೆಹ್ರಾನ್ ಮತ್ತು ಮಶಾದ್ ಸೇರಿದಂತೆ ಹಲವು ನಗರಗಳ ಮೇಲೆ ತಾತ್ಕಾಲಿಕ ವೈಮಾನಿಕ ವಲಯ ನಿರ್ಬಂಧಗಳನ್ನು ಜಾರಿಗೆ ತರಲಾಗುವುದು ಎಂದು ಇರಾನ್‍ನ ನಾಗರಿಕ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.