ಗಾಝಾ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ : ಐವರು ಪತ್ರಕರ್ತರು ಸಹಿತ ಕನಿಷ್ಠ 20 ಮಂದಿ ಮೃತ್ಯು
Photo credit: PTI
ಜೆರುಸಲೇಂ, ಆ.25: ದಕ್ಷಿಣ ಗಾಝಾದ ಮುಖ್ಯ ಆಸ್ಪತ್ರೆಯ ಮೇಲೆ ಸೋಮವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪತ್ರಕರ್ತರು ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
ಖಾನ್ ಯೂನಿಸ್ ನಗರದ ನಾಸೆರ್ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಎರಡು ಕ್ಷಿಪಣಿಗಳು ಅಪ್ಪಳಿಸಿದ್ದು ನಾಲ್ಕು ಮಂದಿ ಪತ್ರಕರ್ತರು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.
`ರಾಯ್ಟರ್ಸ್' ಸುದ್ದಿಸಂಸ್ಥೆಯ ಕ್ಯಾಮರಾಮ್ಯಾನ್ ಹೊಸ್ಸಾಂ ಅಲ್-ಮಸ್ರಿ ಸಾವನ್ನಪ್ಪಿದ್ದರೆ ಛಾಯಾಗ್ರಾಹಕ ಹ್ಯಾಟೆಮ್ ಖಲೀದ್ ಗಾಯಗೊಂಡಿದ್ದಾರೆ. ಅಲ್‍ಜಝೀರಾದ ಫೋಟೋ ಜರ್ನಲಿಸ್ಟ್ ಮುಹಮ್ಮದ್ ಸಲಾಮಾ, ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ಹಲವು ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಮರಿಯಮ್ ಅಬು ದಖಾ, ಎನ್‍ಬಿಸಿ ನೆಟ್‍ವರ್ಕ್‍ನ ಪತ್ರಕರ್ತ ಮೊಯಾಜ್ ಅಬು ತಾಹಾ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಗಾಝಾದಲ್ಲಿ 192 ಪತ್ರಕರ್ತರ ಹತ್ಯೆ
ಗಾಝಾದಲ್ಲಿ ಮುಂದುವರಿದಿರುವ ಯುದ್ಧವು ಆಧುನಿಕ ಕಾಲದಲ್ಲಿ ಪತ್ರಕರ್ತರಿಗೆ ಮಾರಕ ಘರ್ಷಣೆಗಳಲ್ಲಿ ಒಂದಾಗಿದೆ. ಸುಮಾರು 2 ವರ್ಷಗಳ ಹಿಂದೆ ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದಲ್ಲಿ ಸಂಘರ್ಷ ಆರಂಭಗೊಂಡಂದಿನಿಂದ ಕನಿಷ್ಠ 192 ಪತ್ರಕರ್ತರ ಹತ್ಯೆಯಾಗಿದೆ ಎಂದು ` ಪತ್ರಕರ್ತರನ್ನು ರಕ್ಷಿಸುವ ಸಮಿತಿ'(ಸಿಪಿಜೆ) ವರದಿ ಮಾಡಿದೆ.
ಇದೇ ಅವಧಿಯಲ್ಲಿ ಉಕ್ರೇನ್-ರಶ್ಯ ಯುದ್ಧದಲ್ಲಿ 18 ಪತ್ರಕರ್ತರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.
ದಕ್ಷಿಣ ಗಾಝಾದ ಅತೀ ದೊಡ್ಡ ಆಸ್ಪತ್ರೆಯಾಗಿರುವ ನಾಸೆರ್ ಆಸ್ಪತ್ರೆಯ ಮೇಲೆ 22 ತಿಂಗಳ ಯುದ್ಧದ ಸಂದರ್ಭ ಹಲವು ದಾಳಿಗಳು ನಡೆದಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಸರಬರಾಜು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿದೆ.
ನಾಸೆರ್ ಆಸ್ಪತ್ರೆಯ ಪ್ರದೇಶದ ಬಳಿ ದಾಳಿ ನಡೆಸಿರುವುದನ್ನು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ. ನಿರ್ಲಿಪ್ತ ವ್ಯಕ್ತಿಗಳಿಗೆ ಯಾವುದೇ ಹಾನಿಯಾಗಿರುವುದಕ್ಕೆ ವಿಷಾದಿಸುತ್ತೇವೆ ಮತ್ತು ಪತ್ರಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ನಮ್ಮ ಪಡೆಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳುವಾಗ ನಿರ್ಲಿಪ್ತ ವ್ಯಕ್ತಿಗಳಿಗೆ ಹಾನಿಯನ್ನು ತಗ್ಗಿಸುವುದಕ್ಕೆ ಆದ್ಯತೆ ನೀಡುತ್ತೇವೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿದೆ. ನಾಸೆರ್ ಆಸ್ಪತ್ರೆಯ ಪ್ರದೇಶದಲ್ಲಿ ನಡೆದ ದಾಳಿಯ ಬಗ್ಗೆ ತನಿಖೆ ನಡೆಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.