×
Ad

ಇಸ್ರೇಲ್–ಫೆಲೆಸ್ತೀನ್ ವಿವಾದ | ಯುಎನ್ ತನಿಖಾ ಆಯೋಗಕ್ಕೆ ಭಾರತೀಯ ನ್ಯಾಯಶಾಸ್ತ್ರಜ್ಞ ಎಸ್. ಮುರಳೀಧರ್ ನೇತೃತ್ವ

Update: 2025-11-28 19:38 IST

ಎಸ್. ಮುರಳೀಧರ್ | Photo Credit : X

ಜೆರುಸಲೇಂ/ಹೊಸದಿಲ್ಲಿ: ಇಸ್ರೇಲ್ ಹಾಗೂ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಪರಿಶೀಲನೆಗಾಗಿ ವಿಶ್ವಸಂಸ್ಥೆ ರಚಿಸಿರುವ ಪ್ರಮುಖ ಅಂತರರಾಷ್ಟ್ರೀಯ ವಿಚಾರಣಾ ಆಯೋಗಕ್ಕೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಜಾಗತಿಕ ರಾಜಕೀಯದ ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ಇಸ್ರೇಲ್–ಫೆಲೆಸ್ತೀನ್ ಸಂಘರ್ಷದ ಹಿನ್ನಲೆಯಲ್ಲಿ ಈ ಕ್ರಮ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ.

2021ರಲ್ಲಿ ರಚಿಸಲ್ಪಟ್ಟ ಮೂರು ಸದಸ್ಯರ ಆಯೋಗವು ಇದೀಗ ಇಸ್ರೇಲ್ ಗಾಝಾದಲ್ಲಿ ಕೈಗೊಂಡ ಸೇನಾ ಚಟುವಟಿಕೆಗಳು, ವಸಾಹತು ಚಟುವಟಿಕೆಗಳು ಮತ್ತು ಫೆಲೆಸ್ತೀನಿಯರ ಮೇಲಿನ ದೌರ್ಜನ್ಯಗಳ ಕುರಿತು ವಿಸ್ತೃತ ಪರಿಶೀಲನೆ ನಡೆಸಲಿದೆ.

ಮುರಳೀಧರ್ ಅವರು ಬ್ರೆಝಿಲ್‌ ನ ಕಾನೂನು ತಜ್ಞ ಪಾಲೊ ಸೆರ್ಗಿಯೊ ಪಿನ್ಹೀರೊ ಅವರ ನಂತರ ಆಯೋಗದ ನೇತೃತ್ವ ವಹಿಸಲಿದ್ದಾರೆ.

ಕಳೆದ ವರ್ಷ ವಿಶ್ವಸಂಸ್ಥೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಿತ್ತು. ಅಕ್ಟೋಬರ್ 7, 2023ರ ಹಮಾಸ್ ದಾಳಿಯ ನಂತರ ಗಾಝಾದಲ್ಲಿ ಇಸ್ರೇಲ್ ಕೈಗೊಂಡ ಕ್ರಮಗಳು, ಶಸ್ತ್ರಾಸ್ತ್ರ ಪೂರೈಕೆ, ವಸಾಹತು ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಆಯೋಗವು ಮಾನವ ಹಕ್ಕುಗಳ ಮಂಡಳಿ ಹಾಗೂ ಸಾಮಾನ್ಯ ಸಭೆಗೆ ವರದಿ ಸಲ್ಲಿಸಬೇಕಿದೆ.

2025ರ ಸೆಪ್ಟೆಂಬರ್‌ ನಲ್ಲಿ ಆಯೋಗವು ಸಲ್ಲಿಸಿದ್ದ ವರದಿ, ಗಾಝಾದಲ್ಲಿ ಇಸ್ರೇಲ್ ಫೆಲೆಸ್ತೀನಿಯರ ಮೇಲೆ ನರಮೇಧ ನಡೆಸಿದೆ ಎಂದು ಗಂಭೀರ ಆರೋಪ ಮಾಡಿತ್ತು. ಇಸ್ರೇಲ್ ಈ ವರದಿಯನ್ನು ತೀವ್ರವಾಗಿ ತಳ್ಳಿ ಹಾಕಿದ್ದು, ಅದು ರಾಜಕೀಯ ಉದ್ದೇಶಿತ ಎಂದು ಪ್ರತಿಕ್ರಿಯಿಸಿತ್ತು.

ನ್ಯಾಯಮೂರ್ತಿ ಎಸ್. ಮುರಳೀಧರ್ ಯಾರು?

ಮದುರೈ ಹೈಕೋರ್ಟ್‌ನಲ್ಲಿ ವಕಾಲತ್ತು ಆರಂಭಿಸಿ, ನಂತರ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಮುರಳೀಧರ್, ದಿಟ್ಟ ಹಾಗೂ ಪ್ರಗತಿಪರ ತೀರ್ಪುಗಳಿಗೆ ಹೆಸರಾದವರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದರು.

2006ರಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಅವರು, 2021ರಲ್ಲಿ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಭಡ್ತಿ ಹೊಂದಿದರು.

2019ರಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ಸೆಕ್ಷನ್ 377 ರದ್ದು ಮಾಡಿದ ಐತಿಹಾಸಿಕ ತೀರ್ಪು ನೀಡಿದ್ದರು.

2020ರಲ್ಲಿ ದಿಲ್ಲಿ ಗಲಭೆ ಸಂದರ್ಭದಲ್ಲಿ ದ್ವೇಷ ಭಾಷಣ ಪ್ರಕರಣಗಳ ವಿಚಾರದಲ್ಲಿ ಪೊಲೀಸರ ನಿರ್ಲಕ್ಷ್ಯವನ್ನು ಪ್ರಶ್ನಿಸಿದ ಕೆಲವೇ ಗಂಟೆಗಳಲ್ಲೇ ಅವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ದೇಶದ ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

2023ರಲ್ಲಿ ನಿವೃತ್ತಿಯಾದ ಬಳಿಕ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ಮರಳಿದ್ದರು.

ಅಕ್ಟೋಬರ್ 10ರಿಂದ ಜಾರಿಗೆ ಬಂದಿದ್ದ ಇಸ್ರೇಲ್ ಫೆಲೆಸ್ತೀನ್ ನಡುವಿನ ದುರ್ಬಲ ಕದನ ವಿರಾಮದ ನಡುವೆಯೂ, ಗಾಝಾದ ಪರಿಸ್ಥಿತಿ ಗೊಂದಲವಾಗಿಯೇ ಮುಂದುವರಿದಿದೆ. ಈ ಹಿನ್ನಲೆಯಲ್ಲಿ, ನ್ಯಾಯಮೂರ್ತಿ ಮುರಳೀಧರ್ ನೇತೃತ್ವದ ಆಯೋಗ ನೀಡಲಿರುವ ಮುಂದಿನ ವರದಿ ವಿಶ್ವಸಂಸ್ಥೆಯಲ್ಲಿಯೂ, ಜಾಗತಿಕ ರಾಜಕೀಯ ವೇದಿಕೆಯಲ್ಲಿಯೂ ಪ್ರಮುಖ ಚರ್ಚೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News