×
Ad

ಗಾಝಾದಲ್ಲಿ ಇಸ್ರೇಲ್‍ನಿಂದ ಎನ್‍ಜಿಒಗಳಿಗೆ ಹೊಸ ನಿಯಮ

ಹಲವಾರು ಎನ್‍ಜಿಒಗಳ ನೋಂದಣಿ ರದ್ದು: ವರದಿ

Update: 2025-12-21 22:23 IST

Photo Credit : aljazeera.com

ಗಾಝಾ: ಸರ್ಕಾರೇತರ ಸಂಸ್ಥೆಗಳನ್ನು (ಎನ್‍ಜಿಒ) ನೋಂದಾಯಿಸಲು ಇಸ್ರೇಲ್ ಜಾರಿಗೊಳಿಸಿರುವ ಹೊಸ ನಿಯಮಗಳು ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಸಹಾಯ ಕಾರ್ಯಗಳ ಮೇಲೆ ದುರಂತ ಪರಿಣಾಮ ಬೀರಬಹುದು ಎಂದು ಪರಿಹಾರ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಈ ನಿಯಮದಡಿ ಈಗಾಗಲೇ 12ಕ್ಕೂ ಅಧಿಕ ಸಂಸ್ಥೆಗಳನ್ನು ತಿರಸ್ಕರಿಸಲಾಗಿದೆ.

ಹೊಸ ನಿಯಮದಡಿ ಎನ್‍ಜಿಒಗಳು ಡಿಸೆಂಬರ್ 31ರೊಳಗೆ ನೋಂದಣಿ ಮಾಡಿಕೊಳ್ಳಬೇಕಿದೆ. ಫೆಲೆಸ್ತೀನಿಯನ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಕೂಲ ಗುಂಪುಗಳು ಅಥವಾ ಭಯೋತ್ಪಾದನೆಯ ಬೆಂಬಲಿಗರನ್ನು ತಡೆಯುವುದು ಈ ನಿಯಮದ ಉದ್ದೇಶವಾಗಿದೆ ಎಂದು ಇಸ್ರೇಲ್ ಹೇಳಿದೆ. ಆದರೆ ನೀರು ಮತ್ತು ವಿದ್ಯುತ್‍ನ ಕೊರತೆ ಎದುರಿಸುತ್ತಿರುವ ಗಾಝಾ ಪ್ರದೇಶಕ್ಕೆ ಈ ನಿಯಮ ಹೊಸ ಸಮಸ್ಯೆಗಳಿಗೆ ಕಾರಣವಾಗಿದೆ.

2025ರ ನವೆಂಬರ್‍ವರೆಗೆ ನೋಂದಾವಣೆ ಕೋರಿ ಸುಮಾರು 100 ಅರ್ಜಿಗಳನ್ನು ಸಲ್ಲಿಸಲಾಗಿದ್ದು 14 ಸಂಸ್ಥೆಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದವುಗಳಲ್ಲಿ ಕೆಲವು ಅನುಮೋದನೆಗೊಂಡಿದ್ದರೆ ಕೆಲವು ಪರಿಶೀಲನೆಯಲ್ಲಿದೆ. ಭಯೋತ್ಪಾದನೆ, ಯೆಹೂದಿ ವಿರೋಧಿ ನೀತಿ ಅನುಸರಿಸುತ್ತಿರುವ ಸಂಸ್ಥೆಗಳು, ಇಸ್ರೇಲ್‍ನ ನ್ಯಾಯಸಮ್ಮತತೆ(ಅಸ್ತಿತ್ವವನ್ನು) ಒಪ್ಪದ, ಅಕ್ಟೋಬರ್ 8ರ ಅಪರಾಧವನ್ನು ನಿರಾಕರಿಸುವ ಸಂಸ್ಥೆಗಳ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಇಸ್ರೇಲ್‍ನ `ವಲಸೆ ವ್ಯವಹಾರಗಳ' ಇಲಾಖೆ ಹೇಳಿದೆ. ಅಕ್ಟೋಬರ್ 10ರ ಕದನ ವಿರಾಮ ಒಪ್ಪಂದವು ದಿನಕ್ಕೆ 600 ಟ್ರಕ್‍ಗಳ ಪ್ರವೇಶವನ್ನು ನಿಗದಿಪಡಿಸಿದ್ದರೆ, ಈಗ ಕೇವಲ 100ರಿಂದ 300 ಟ್ರಕ್‍ಗಳು ಮಾತ್ರ ಮಾನವೀಯ ನೆರವನ್ನು ಒಯ್ಯುತ್ತಿವೆ ಎಂದು ವಿಶ್ವಸಂಸ್ಥೆ ಹಾಗೂ ಎನ್‍ಜಿಒ ಮೂಲಗಳು ಹೇಳಿವೆ.

ಹೊಸ ನಿಯಮದಡಿ ನಿರ್ಬಂಧಿಸಲಾಗಿರುವ ಎನ್‍ಜಿಒಗಳಲ್ಲಿ `ಸೇವ್ ದಿ ಚಿಲ್ಡ್ರನ್' (ಗಾಝಾದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು 1,20.000ಕ್ಕೂ ಅಧಿಕ ಮಕ್ಕಳಿಗೆ ನೆರವಾಗಿದೆ) ಮತ್ತು ಅಮೆರಿಕನ್ ಫ್ರೆಂಡ್ಸ್ ಸರ್ವಿಸ್ ಕಮಿಟಿ ಸೇರಿದ್ದು ಗಾಝಾ ಪಟ್ಟಿ, ಆಕ್ರಮಿತ ಪಶ್ಚಿಮದಂಡೆ ಮತ್ತು ಇಸ್ರೇಲ್‍ನಿಂದ ಎಲ್ಲಾ ಅಂತರಾಷ್ಟ್ರೀಯ ಸಿಬ್ಬಂದಿಗಳನ್ನೂ 60 ದಿನಗಳ ಒಳಗೆ ಹಿಂಪಡೆಯುವಂತೆ ಸೂಚಿಸಲಾಗಿದೆ. ಈ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಯಾವುದೇ ನೆರವು ಪೂರೈಸಲು ಸಾಧ್ಯವಾಗದು.

ಹಲವಾರು ಎನ್‍ಜಿಒಗಳ ನೋಂದಣಿ ರದ್ದುಗೊಳ್ಳುವ ಅಪಾಯವಿದೆ. ಎನ್‍ಜಿಒಗಳ ನೋಂದಣಿ ರದ್ದುಗೊಳಿಸುವುದು ಅಗತ್ಯ ಮತ್ತು ಮೂಲಭೂತ ಸೇವೆಗಳ ಪ್ರವೇಶದ ಮೇಲೆ ದುರಂತ ಪರಿಣಾಮವನ್ನು ಬೀರುತ್ತದೆ ಎಂದು `ದಿ ಹ್ಯುಮಾನಿಟೇರಿಯನ್ ಕಂಟ್ರಿ ಟೀಮ್ ಫಾರ್ ದಿ ಆಕ್ಯುಪೈಡ್ ಪೆಲೆಸ್ತೀನಿಯನ್ ಟೆರಿಟರಿ' (ಎಚ್‍ಸಿಟಿ) ಎಚ್ಚರಿಸಿದೆ. ಕೆಲವು ಎನ್‍ಜಿಒಗಳು ನೋಂದಣಿಗೊಂಡಿದ್ದರೂ ಗಾಝಾಕ್ಕೆ ಅಗತ್ಯ ಪ್ರಮಾಣದ ನೆರವು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಇದು ಸಾಕಾಗದು ಎಂದು ಎಚ್‍ಸಿಟಿ ಹೇಳಿದೆ.

ತಮ್ಮಲ್ಲಿರುವ ಫೆಲೆಸ್ತೀನಿಯನ್ ಸಿಬ್ಬಂದಿಗಳ ಬಗ್ಗೆ ಇಸ್ರೇಲ್‍ಗೆ ಮಾಹಿತಿ ನೀಡುವ ಮೂಲಕ `ಕೆಂಪು ಗೆರೆ'ಯನ್ನು ದಾಟಲು ತಾವು ಸಿದ್ಧರಿಲ್ಲ ಎಂದು ಹಲವು ಎನ್‍ಜಿಒಗಳು ಸ್ಪಷ್ಟಪಡಿಸಿದೆ. ಮಾನವೀಯ ಪ್ರತಿಕ್ರಿಯೆಯ ಕುಸಿತದ ಅಪಾಯ ಉಂಟು ಮಾಡುವ ಹೊಸ ನೋಂದಣಿ ಪ್ರಕ್ರಿಯೆ ಸೇರಿದಂತೆ ಎಲ್ಲಾ ಅಡೆತಡೆಗಳನ್ನು ನಿವಾರಿಸುವಂತೆ ಈ ಪ್ರದೇಶದಲ್ಲಿ ಕೆಲಸ ಮಾಡುವ ವಿಶ್ವಸಂಸ್ಥೆ ಏಜೆನ್ಸಿಗಳು ಮತ್ತು ಎನ್‍ಜಿಒಗಳನ್ನು ಒಟ್ಟುಗೂಡಿಸುವ ವೇದಿಕೆ ಇಸ್ರೇಲನ್ನು ಆಗ್ರಹಿಸಿದೆ.

ಎನ್‍ಜಿಒಗಳು ಜನಸಂಖ್ಯೆಯಿಂದ ಹೇಳಿಕೆ, ಸಾಕ್ಷ್ಯಗಳನ್ನು ರವಾನಿಸುವುದು, ಕಾರ್ಯಾಚರಣೆಯ ಕೆಲಸವನ್ನು ನಿರ್ವಹಿಸುವುದು, , ಏನಾಗುತ್ತಿದೆ ಎಂದು ಹೇಳುವುದು ಹಾನಿಕಾರಕವೆಂದು ಪರಿಗಣಿಸಿದರೆ ಮತ್ತು ಎನ್‍ಜಿಒಗಳ ಕೆಲಸವನ್ನು ನಿಷೇಧಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಫ್ರಾನ್ಸ್‍ನ ಎನ್‍ಜಿಒ `ಮೆಡಿಸಿನ್ಸ್ ಡ್ಯುಮೊಂಡೆ'ಯ ಪ್ರತಿನಿಧಿ ಕಳವಳ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News