ಮೊಟ್ಟಮೊದಲ ಬಾರಿಗೆ 700 ಶತಕೋಟಿ ಡಾಲರ್ ಮೈಲುಗಲ್ಲು ದಾಟಿದ ಎಲಾನ್ ಮಸ್ಕ್!
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ
ಎಲಾನ್ ಮಸ್ಕ್ | Photo Credit : PTI
ನ್ಯೂಯಾರ್ಕ್: ತಂತ್ರಜ್ಞಾನ ದಿಗ್ಗಜ ಎಲಾನ್ ಮಸ್ಕ್, ವಿಶ್ವದಲ್ಲೇ 700 ಶತಕೋಟಿ ಡಾಲರ್ ಸಂಪತ್ತು ಹೊಂದಿದ ಮೊಟ್ಟಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿ ಟೆಸ್ಲಾದಲ್ಲಿ ಅವರ ಹೊಣೆಗಾರಿಕೆಗೆ ನೀಡುವ ಭಾರಿ ಮೊತ್ತದ ಪ್ಯಾಕೇಜ್ ಅನ್ನು ನ್ಯಾಯಾಲಯದ ಆದೇಶವೊಂದು ಪುನಃಸ್ಥಾಪಿಸಿದ ಹಿನ್ನೆಲೆಯಲ್ಲಿ ಈ ಮೈಲುಗಲ್ಲು ಸ್ಥಾಪಿಸುವುದು ಸಾಧ್ಯವಾಗಿದೆ.
ಕಳೆದ ವಾರ ಡೆಲವೇರ್ ಸುಪ್ರೀಂಕೋರ್ಟ್, ಎಲಾನ್ ಮಸ್ಕ್ ಅವರ 2018ರ ವೇತನ ಪ್ಯಾಕೇಜ್ ನಲ್ಲಿ ಷೇರು ಆಯ್ಕೆಯ ಅವಕಾಶವನ್ನು ಪುನಃಸ್ಥಾಪಿಸಿದೆ. ಕೆಳಹಂತದ ನ್ಯಾಯಾಲಯ ರದ್ದುಪಡಿಸಿದ್ದ ಪ್ಯಾಕೇಜನ್ನು ಸುಪ್ರೀಂಕೋರ್ಟ್ ಮರು ಸ್ಥಾಪಿಸಿದ ಹಿನ್ನೆಲೆಯಲ್ಲಿ ಅವರ ಅಂದಾಜು ಸಂಪತ್ತಿನ ಮೌಲ್ಯ 749 ಶತಕೋಟಿ ಡಾಲರ್ ತಲುಪಿದೆ. ಈ ಷೇರು ಆಯ್ಕೆ ಅವಕಾಶದಿಂದಾಗಿ ಒಟ್ಟು ಮೌಲ್ಯ ಸುಮಾರು 139 ಶತಕೋಟಿ ಡಾಲರ್ ನಷ್ಟು ಹೆಚ್ಚಿದಂತಾಗಿದೆ. ಮೊದಲು ಅನುಮೋದನೆಗೊಂಡಾಗ ಈ ಪ್ಯಾಕೇಜ್‍ನ ಮೂಲ ಮೌಲ್ಯ 56 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿತ್ತು.
ಎಲಾನ್ ಮಸ್ಕ್ ಅವರ ಪ್ಯಾಕೇಜ್ ರದ್ದುಪಡಿಸಿರುವ ಹೈಕೋರ್ಟ್ ನ ಕ್ರಮ ನ್ಯಾಯಸಮ್ಮತವಲ್ಲ ಹಾಗೂ ತಪ್ಪು ಎಂದು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈ ಪ್ಯಾಕೇಜ್ ಮರು ಸ್ಥಾಪನೆಯಿಂದಾಗಿ ಮಸ್ಕ್ ಅವರ ಸಂಪತ್ತು ಗಣನೀಯವಾಗಿ ಹೆಚ್ಚಿದ್ದು, ದೊಡ್ಡ ಅಂತರದಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಸ್ಕ್ ಹೊರಹೊಮ್ಮಿದ್ದಾರೆ.
ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ ಮಸ್ಕ್ ಅವರ ಸಂಪತ್ತು 600 ಶತಕೋಟಿ ಡಾಲರ್ ಗಡಿಯನ್ನು ದಾಟಿತ್ತು. ಅವರ ಬಾಹ್ಯಾಕಾಶ ಕಂಪೆನಿಯಾದ ಸ್ಪೇಸ್‍ಎಕ್ಸ್ ಸಾರ್ವಜನಿಕ ವಲಯ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಸಂಪತ್ತು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.