ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ನಿವಾಸಕ್ಕೆ ಬೆಂಕಿ: 7 ವರ್ಷದ ಪುತ್ರಿ ಸಜೀವ ದಹನ
ಢಾಕಾ: ಶನಿವಾರ ನಸುಕಿನಲ್ಲಿ ಲಕ್ಷ್ಮೀಪುರ್ ಸದರ್ ಉಪಜಿಲ್ಲಾದಲ್ಲಿನ ಬಿಎನ್‌ಪಿ ನಾಯಕ ಬೆಲಾಲ್ ಉಸೈನ್ ಮನೆಗೆ ಬೆಂಕಿ ಹಚ್ಚಿದ ಪರಿಣಾಮ, ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ನಡೆದ 2024ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೆ ರಾತ್ರೋರಾತ್ರಿ ಬಾಂಗ್ಲಾದೇಶದ ಹಲವಾರು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿತ್ತು. ಇದರ ಬೆನ್ನಲ್ಲೆ ಘಟನೆ ನಡೆದಿದೆ.
ಭಬನಿಗಂಜ್ ಯೂನಿಯನ್‌ನ ಬಿಎನ್‌ಪಿ ಪಕ್ಷದ ಸಹಾಯಕ ಸಂಘಟನಾ ಕಾರ್ಯದರ್ಶಿ ಹಾಗೂ ಉದ್ಯಮಿಯಾದ ಬೆಲಾಲ್ ಹೊಸೈನ್ ಅವರ ಚಾರ್ ಮಾನಸಾ ಗ್ರಾಮದಲ್ಲಿನ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ, ಬೆಲಾಲ್ ಅವರ 7 ವರ್ಷದ ಪುತ್ರಿ ಆಯೇಷಾ ಅಖ್ತರ್ ಸಜೀವವಾಗಿ ದಹನಗೊಂಡಿದ್ದಾರೆ ಎಂದು ಲಕ್ಷ್ಮೀಪುರ್ ಸದರ್ ಮಾಡೆಲ್ ಠಾಣೆಯ ಉಸ್ತುವಾರಿ ಅಧಿಕಾರಿ ಮುಹಮ್ಮದ್ ವಾಹಿದ್ ಪರ್ವೇಝ್ ತಿಳಿಸಿದ್ದಾರೆ ಎಂದು The Daily Star ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯಲ್ಲಿ ಬೆಲಾಲ್ ಹೊಸೈನ್ ಹಾಗೂ ಅವರ ಇನ್ನಿಬ್ಬರು ಪುತ್ರಿಯರಾದ ಸಲ್ಮಾ ಅಖ್ತರ್ (16) ಹಾಗೂ ಸಾಮಿಯಾ ಅಖ್ತರ್ (14) ಅವರಿಗೆ ಗಂಭೀರ ಸುಟ್ಟಗಾಯಗಳಾಗಿವೆ.
ಬೆಲಾಲ್ ಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪುತ್ರಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾಗೆ ರವಾನಿಸಲಾಗಿದೆ ಎಂದು ಉಸ್ತುವಾರಿ ಅಧಿಕಾರಿ ಮುಹಮ್ಮದ್ ವಾಹಿದ್ ಪರ್ವೇಝ್ ತಿಳಿಸಿದ್ದಾರೆ.