ಬೆಂಜಮಿನ್ ನೆತನ್ಯಾಹು | ಗಾಡಿ ಐಸೆನ್‌ಕೋಟ್ Photo: x.com/MarioNawfal

ಟೆಲ್ ಅವಿವ್: ಇಸ್ರೇಲ್‌ ನ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎಂಬ ಕುತೂಹಲ ಹೆಚ್ಚಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದ ಮೈತ್ರಿಕೂಟ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷಗಳ ಬಣ ತಲಾ 51 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಮತದಾನೋತ್ತರ ಸಮೀಕ್ಷೆಗಳು ವ್ಯಕ್ತಪಡಿಸಿವೆ. ಹೀಗಾಗಿ, 120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ (ನೆಸೆಟ್) ಸರ್ಕಾರ ರಚನೆಗೆ ಅಗತ್ಯವಿರುವ 61 ಸ್ಥಾನಗಳ ಬಹುಮತ ಯಾವುದೇ ಬಣಕ್ಕೆ ಸಿಗದಿರುವ ಸಾಧ್ಯತೆಯಿದೆ ಎಂದು Aljazeera ವರದಿ ಮಾಡಿದೆ.

ಮಂಗಳವಾರ ಪ್ರಕಟವಾದ ಪ್ರಮುಖ ಟಿವಿ ಸಮೀಕ್ಷೆಗಳ ಪ್ರಕಾರ, ಅರಬ್ ಮೂಲದ ಪಕ್ಷಗಳು 18 ಸ್ಥಾನಗಳನ್ನು ಗೆಲ್ಲಬಹುದು. ಈ ಪಕ್ಷಗಳ ಬೆಂಬಲ ಪಡೆಯುವಲ್ಲಿ ಇತರ ಪಕ್ಷಗಳು ಯಶಸ್ವಿಯಾದರೆ, ಸರ್ಕಾರ ರಚನೆಯ ರಾಜಕೀಯ ಲೆಕ್ಕಾಚಾರದಲ್ಲಿ ಅವು ನಿರ್ಣಾಯಕ ಪಾತ್ರ ವಹಿಸಬಹುದು.

2023ರ ಅಕ್ಟೋಬರ್ 7ರಂದು ಹಮಾಸ್ ನೇತೃತ್ವದಲ್ಲಿ ಇಸ್ರೇಲ್ ಮೇಲೆ ನಡೆದ ದಾಳಿಯ ಬಳಿಕ ನಡೆಯುತ್ತಿರುವ ಮೊದಲ ಸಂಸದೀಯ ಚುನಾವಣೆ ಇದಾಗಿದೆ. ಅಕ್ಟೋಬರ್ 27ರಂದು ನಡೆದ ಮತದಾನದಲ್ಲಿ ಶೇ 77.7ರಷ್ಟು ಮತದಾನವಾಗಿದ್ದು, 1999ರ ಬಳಿಕದ ಗರಿಷ್ಠ ಪ್ರಮಾಣವಾಗಿದೆ ಎಂದು ವರದಿಯಾಗಿದೆ.

‘ನೆತನ್ಯಾಹು ಮೇಲಿನ ನಂಬಿಕೆ ಕುಸಿದಿದೆ’

ಮತದಾನೋತ್ತರ ಸಮೀಕ್ಷೆಗಳು ನೆತನ್ಯಾಹು ಅವರ ಮೇಲಿನ ಜನರ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತಿವೆ ಎಂದು ಯಶಾರ್ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ಹೇಳಿದ್ದಾರೆ.

ನೆತನ್ಯಾಹು ನೇತೃತ್ವದ ಮೈತ್ರಿಕೂಟ ಭಾರಿ ಸೋಲು ಅನುಭವಿಸಿದೆ ಎಂದು ವಿರೋಧ ಪಕ್ಷದ ನಾಯಕ ಯಾಯಿರ್ ಲಾಪಿಡ್ ಹೇಳಿದ್ದಾರೆ. ‘ಇದು ಸಂಪೂರ್ಣ ಕುಸಿತ. ಜನರು ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಹೇಳಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಲಿಕುಡ್ ಪಕ್ಷದ ನಾಯಕ ಹಾಗೂ ಇಸ್ರೇಲ್‌ ನ ವಿದೇಶಾಂಗ ಸಚಿವ ಗಿಡಿಯೋನ್ ಸಾರ್, ವಿರೋಧ ಪಕ್ಷಗಳು ಸಂಭ್ರಮಾಚರಣೆ ಮಾಡಲು ಇನ್ನೂ ಸಮಯ ಬಂದಿಲ್ಲ ಎಂದು ಹೇಳಿದ್ದಾರೆ. ‘ಇಸ್ರೇಲ್‌ನಲ್ಲಿ ಲಿಕುಡ್ ಅತಿದೊಡ್ಡ ಪಕ್ಷವಾಗಿದೆ. ಹಿಂದಿನ ಅನುಭವಗಳಿಂದ ಪಾಠ ಕಲಿಯುವುದು ಯಾವಾಗಲೂ ಒಳ್ಳೆಯದು’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಕಳೆದ 30 ವರ್ಷಗಳಲ್ಲಿ ಸುಮಾರು 19 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ನೆತನ್ಯಾಹು, ಹಲವು ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಿಯೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಇಸ್ರೇಲ್‌ ನ ಫೆಲೆಸ್ತೀನ್ ಮೂಲದ ರಾಜಕೀಯ ವಿಶ್ಲೇಷಕ ಮತ್ತು ಸಂಶೋಧಕ ಇಹಾಬ್ ಜಬರೀನ್ ಅವರ ಪ್ರಕಾರ, ಆರಂಭಿಕ ಸಮೀಕ್ಷೆಗಳು ನೆತನ್ಯಾಹು ಬಣ ದುರ್ಬಲಗೊಂಡಿರುವುದನ್ನು ಸೂಚಿಸುತ್ತವೆ. ಆದರೆ, ಇದನ್ನೇ ಅವರ ರಾಜಕೀಯ ಜೀವನದ ಅಂತ್ಯವೆಂದು ಪರಿಗಣಿಸುವುದು ಸರಿಯಲ್ಲ. ‘ನೆತನ್ಯಾಹು ಬಣ ಬಹುಮತ ಕಳೆದುಕೊಂಡಿದೆ. ಆದರೆ, ವಿರೋಧ ಪಕ್ಷಗಳಿಗೆ ಬಹುಮತ ಒಗ್ಗೂಡಿಸಿಕೊಳ್ಳುವುದು ಕಠಿಣ ಸವಾಲಾಗಿದೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದರೆ, ಮಾತುಕತೆ ಮುಂದುವರಿಯುವವರೆಗೆ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಅಧಿಕಾರದಲ್ಲಿ ಮುಂದುವರಿಯಬಹುದು’ ಎಂದು ಅವರು ಹೇಳಿದ್ದಾರೆ.

ಸರ್ಕಾರ ರಚನೆಗೆ ಅಧ್ಯಕ್ಷರ ನಿರ್ಧಾರ

ನವೆಂಬರ್ 4ರಂದು ಮತಗಳ ಅಂತಿಮ ಎಣಿಕೆ ಪೂರ್ಣಗೊಂಡ ಬಳಿಕ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರು ವಿವಿಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪ್ರಧಾನಿಯಾಗಿ ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ಕೇಳಿದ ಬಳಿಕ, ಸರ್ಕಾರ ರಚಿಸಲು ಹೆಚ್ಚಿನ ಅವಕಾಶ ಹೊಂದಿದ್ದಾರೆ ಎಂದು ಭಾವಿಸುವ ಅಭ್ಯರ್ಥಿಯನ್ನು ಆಹ್ವಾನಿಸಲಿದ್ದಾರೆ.

ಸಂಸತ್ತಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷದ ನಾಯಕನನ್ನೇ ಸರ್ಕಾರ ರಚನೆಗೆ ಆಹ್ವಾನಿಸಬೇಕೆಂಬ ನಿಯಮವಿಲ್ಲ. ನೆತನ್ಯಾಹು ಮತ್ತು ಐಸೆನ್‌ಕೋಟ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಸರ್ಕಾರ ರಚಿಸಲು ಆಹ್ವಾನಿತ ಅಭ್ಯರ್ಥಿಗೆ ಆರಂಭದಲ್ಲಿ 28 ದಿನಗಳ ಕಾಲಾವಕಾಶ ಸಿಗಲಿದೆ. ಅಗತ್ಯವಿದ್ದರೆ ಅಧ್ಯಕ್ಷರು ಹೆಚ್ಚುವರಿಯಾಗಿ 14 ದಿನಗಳ ಕಾಲಾವಕಾಶ ನೀಡಬಹುದು. ಒಟ್ಟು 42 ದಿನಗಳಲ್ಲಿ ಅಭ್ಯರ್ಥಿ ವಿವಿಧ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ಬೆಂಬಲ ಪಡೆಯಬೇಕು.

ಈ ಮಾತುಕತೆಗಳಲ್ಲಿ ಪಕ್ಷಗಳು ತಮ್ಮ ನೀತಿಗಳಿಗೆ ಅನುಕೂಲಕರ ಬದಲಾವಣೆಗಳು ಹಾಗೂ ಸಂಪುಟದಲ್ಲಿ ನಿರ್ದಿಷ್ಟ ಸಚಿವ ಸ್ಥಾನಗಳನ್ನು ಪಡೆಯಲು ಪ್ರಯತ್ನಿಸಬಹುದು. ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ 61 ಸ್ಥಾನಗಳನ್ನು ಯಾವುದೇ ಬಣ ಪಡೆಯದಿದ್ದರೆ, ಸಣ್ಣ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಪ್ರಯತ್ನಿಸಬಹುದು. ಅಲ್ಲದೆ, ಇಬ್ಬರು ನಾಯಕರು ನಿಗದಿತ ಅವಧಿಗೆ ಸರದಿಯಂತೆ ಪ್ರಧಾನಿಯಾಗುವ ಅಧಿಕಾರ ಹಂಚಿಕೆ ಒಪ್ಪಂದವನ್ನೂ ಮಾಡಿಕೊಳ್ಳಬಹುದು.

ಹೊಸ ಸರ್ಕಾರ ಸಂಸತ್ತಿನಲ್ಲಿ ವಿಶ್ವಾಸಮತ ಗೆಲ್ಲಬೇಕು. ಕೆಲವು ಪಕ್ಷಗಳು ಮತದಾನದಿಂದ ದೂರ ಉಳಿದರೆ, ಅಗತ್ಯವಿರುವ ಮತಗಳ ಸಂಖ್ಯೆ 61ಕ್ಕಿಂತ ಕಡಿಮೆಯಾಗಬಹುದು.

ಮಾತುಕತೆ ವಿಫಲವಾದರೆ ಮತ್ತೊಂದು ಚುನಾವಣೆ

ಮೊದಲ ಅಭ್ಯರ್ಥಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಮತ್ತೊಬ್ಬ ನೆಸೆಟ್ ಸದಸ್ಯರಿಗೆ 28 ದಿನಗಳೊಳಗೆ ಸರ್ಕಾರ ರಚಿಸಲು ಪ್ರಯತ್ನಿಸುವಂತೆ ಅಧ್ಯಕ್ಷರು ಸೂಚಿಸಬಹುದು. ಅವರೂ ವಿಫಲವಾದರೆ, ಸಂಸತ್ ಸದಸ್ಯರ ಬಹುಮತವು ಮೂರನೇ ಅಭ್ಯರ್ಥಿಯನ್ನು ಸೂಚಿಸಬಹುದು. ಅವರಿಗೆ ಕೊನೆಯ 14 ದಿನಗಳ ಕಾಲಾವಕಾಶ ಸಿಗಲಿದೆ.

ಈ ಎಲ್ಲ ಪ್ರಯತ್ನಗಳ ಬಳಿಕವೂ ಬಿಕ್ಕಟ್ಟು ಬಗೆಹರಿಯದಿದ್ದರೆ, ಸಂಸತ್ತನ್ನು ವಿಸರ್ಜಿಸಿ ಮತ್ತೊಂದು ಚುನಾವಣೆ ನಡೆಸಬೇಕಾಗುತ್ತದೆ. ಅಂತಹ ಚುನಾವಣೆಯನ್ನು 90 ದಿನಗಳೊಳಗೆ ಘೋಷಿಸಬೇಕು. ಅಷ್ಟರವರೆಗೆ ನೆತನ್ಯಾಹು ನೇತೃತ್ವದ ಸರ್ಕಾರ ಹಂಗಾಮಿ ಸರ್ಕಾರವಾಗಿ ಮುಂದುವರಿಯಲಿದೆ.

ಇಸ್ರೇಲ್ ಈ ಹಿಂದೆ ಇಂತಹ ಬಿಕ್ಕಟ್ಟನ್ನು ಎದುರಿಸಿತ್ತು. 2019ರ ಎಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ ನೆಸೆಟ್‌ನಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಮೂರು ಸುತ್ತಿನ ಚುನಾವಣೆಗಳು ನಡೆದಿದ್ದವು. ಬಳಿಕ ನೆತನ್ಯಾಹು ಮತ್ತು ಅವರ ಆಗಿನ ಪ್ರಮುಖ ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಜ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಏರ್ಪಟ್ಟಿತ್ತು. ಇಬ್ಬರೂ ಸರದಿಯ ಮೇಲೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಬಜೆಟ್ ಮಂಡಿಸಲು ವಿಫಲವಾದ ಕಾರಣ ಒಂದು ವರ್ಷದ ಬಳಿಕ ಆ ಸರ್ಕಾರ ಪತನಗೊಂಡಿತ್ತು.

ಅರಬ್ ಪಕ್ಷಗಳ ಬೆಂಬಲ ಪಡೆಯುವರೇ?

ಅರಬ್ ನೇತೃತ್ವದ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದ್ದರೂ, ನೆತನ್ಯಾಹು ಮತ್ತು ಐಸೆನ್‌ಕೋಟ್ ಇಬ್ಬರೂ ಅವುಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಮೌಲ್ಯಗಳಲ್ಲಿ ಸಾಮ್ಯತೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಇಸ್ರೇಲಿ ರಾಜಕೀಯ ವಿಶ್ಲೇಷಕ ಅಸಾಫ್ ರೋನೆಲ್ ಅವರ ಪ್ರಕಾರ, ಸಮೀಕ್ಷೆಗಳು ನೆತನ್ಯಾಹು ನೇತೃತ್ವದ ಸರ್ಕಾರದ ಅಂತ್ಯದ ಸಾಧ್ಯತೆಯನ್ನು ಸೂಚಿಸುತ್ತಿದ್ದರೂ, ಇತರ ನಾಯಕರು ಅರಬ್ ನೇತೃತ್ವದ ಪಕ್ಷಗಳೊಂದಿಗೆ ಸಹಕರಿಸಲು ಸಿದ್ಧರಾಗುತ್ತಾರೆಯೇ ಎಂಬ ಪ್ರಶ್ನೆ ಉಳಿದಿದೆ.

‘ನಾಯಕರು ತಮ್ಮ ಚುನಾವಣಾ ಪ್ರಚಾರದಲ್ಲಿ ವ್ಯಕ್ತಪಡಿಸಿರುವ ಜನಾಂಗೀಯ ಪೂರ್ವಗ್ರಹಗಳನ್ನು ಬದಿಗಿಟ್ಟು ಅರಬ್ ಪಕ್ಷಗಳೊಂದಿಗೆ ಸಹಕರಿಸುತ್ತಾರೆಯೇ ಎಂಬುದೇ ಈಗಿನ ಪ್ರಶ್ನೆ. ಹಾಗಾಗದಿದ್ದರೆ, ಮುಂದಿನ ಕೆಲವು ತಿಂಗಳುಗಳಲ್ಲಿ ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆಯಿದೆ’ ಎಂದು ಅವರು ಹೇಳಿದ್ದಾರೆ.

ಸೌಜನ್ಯ: Aljazeera.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor